ಹಾವೇರಿ: 3 ಕೃಷಿ ಕಾಯಿದೆಗಳನ್ನು ಪ್ರಧಾನಿ ನರೇಂದ್ರ ಮೋದಿ ವಾಪಸ್ ಪಡೆದಿರುವ ವಿಚಾರ ನನಗೆ ತಿಳಿದಿಲ್ಲ. ನಾನು ಮುಂಜಾನೆಯಿಂದ ಹೊಲದಲ್ಲಿದ್ದೇನೆ. ಟಿವಿ ಸಹ ನೋಡಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಪುರದಗೇರಿ ಗ್ರಾಮದಲ್ಲಿನ ಬೆಳೆ ಹಾನಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಕೃಷಿ ಕಾಯಿದೆ ಬಗ್ಗೆ ನನಗೆ ಇನ್ನೂ ಮಾಹಿತಿ ಬಂದಿಲ್ಲ. ಮಾಹಿತಿ ಬಂದ ನಂತರ ಹೇಳುತ್ತೇನೆ. ಯಾವ ಕಾರಣಕ್ಕೆ ತೆಗೆದಿದ್ದಾರೆ?. ಏನು ಮಾಡಿದ್ದಾರೆ?. ಪ್ರಧಾನಿ ಏನು ಹೇಳಿದ್ದಾರೆ? ಎಂಬುವುದರ ಬಗ್ಗೆ ಗೊತ್ತಿಲ್ಲ ಎಂದು ಸಚಿವರು ತಿಳಿಸಿದರು.
ಸಚಿವ ಬಿ.ಸಿ.ಪಾಟೀಲ್ ರಟ್ಟೀಹಳ್ಳಿ ತಾಲೂಕಿನ ಹಳ್ಳೂರು, ಪುರದಕೇರಿ ಗ್ರಾಮಗಳಲ್ಲಿ ಬೆಳೆ ಹಾನಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿ, ಅಕಾಲಿಕ ಮಳೆಯಿಂದ ಭತ್ತ, ಜೋಳ, ಬಾಳೆ ನೆಲಕಚ್ಚಿದೆ. ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಕಂದಾಯ ಇಲಾಖೆಯವರ ಜತೆ ಸೇರಿ ಸಮೀಕ್ಷೆ ಮಾಡಿ ವರದಿ ಕೊಡುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
'ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ':
ಚಿಕ್ಕಕಬ್ಬಾರ, ಹಿರೇಕಬ್ಬಾರ, ಚಟ್ನಳ್ಳಿ, ಪುರುದಕೇರಿ ಭಾಗದಲ್ಲಿ ನಾನೂ ಕೂಡ ವೀಕ್ಷಣೆ ಮಾಡಿದ್ದೇನೆ. ಕೂಡಲೇ ನಷ್ಟದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವರದಿ ನೀಡಿದ ನಂತರ ಸರ್ಕಾರದಿಂದ ರೈತರಿಗೆ ಪರಿಹಾರ ಬಿಡುಗಡೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ನವೆಂಬರ್ ತಿಂಗಳಲ್ಲಿ 3 ಲಕ್ಷ 63 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಜುಲೈನಿಂದ ಇಲ್ಲಿಯವರೆಗೆ 10 ಲಕ್ಷ 73 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಎನ್ಡಿಆರ್ಎಫ್ (NDRF) ಮತ್ತು ಎಸ್ಡಿಆರ್ಎಫ್(SDRF) ನಿಯಮದಂತೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಜತೆಗೆ ಸಿಎಂ ಅವರಿಗೂ ಒತ್ತಾಯ ಮಾಡುತ್ತೇನೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ, ಕೋಲಾರ, ಬಳ್ಳಾರಿ, ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಹೆಚ್ಚು ಪ್ರಮಾಣದ ಹಾನಿ ಆಗಿದೆ. ರಾಜ್ಯದಲ್ಲಿ ಎಲ್ಲೆಲ್ಲಿ ಹಾನಿ ಆಗಿದೆ. ಅದರ ಬಗ್ಗೆ ಪರಿಶೀಲನೆ ಮಾಡಿ ವರದಿ ಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.
ಇದನ್ನೂ ಓದಿ:ಪಂಚರಾಜ್ಯ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕೃಷಿ ಕಾಯ್ದೆ ವಾಪಸ್: ಹೆಚ್‌ಡಿಕೆ