ಹಾವೇರಿ:ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ 17 ಜನರ ಪಾಡು ನಾಯಿ ಪಾಡಾಗುತ್ತೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಬಿ.ಸಿ. ಪಾಟೀಲ್ ವ್ಯಂಗ್ಯ ಹಾವೇರಿಯಲ್ಲಿ ಮಾತನಾಡಿದ ಅವರು, ಮನುಷ್ಯರನ್ನ ನಾಯಿಗೆ ಹೋಲಿಸುವುದು, ಬಂಡೆಗೆ ಹೋಲಿಸುವುದು, ಹುಲಿ, ಟಗರಿಗೆ ಹೋಲಿಸುವುದು ಕಾಂಗ್ರೆಸ್ ಸಂಸ್ಕೃತಿ. ಈ ರೀತಿ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಸಂಸ್ಕೃತಿ ಏನು ಎನ್ನುವುದನ್ನ ಅವರ ಹೇಳಿಕೆಯೇ ತಿಳಿಸುತ್ತದೆ ಎಂದರು.
ಸಿದ್ದರಾಮಯ್ಯ ಭಾಷೆಯನ್ನ ನಾನು ಬಳಸಲು ಮನಸ್ಸು ಬರುತ್ತಿಲ್ಲ. ಇಂತಹ ಹೇಳಿಕೆಗಳು ಸಿದ್ದರಾಮಯ್ಯನ ಘನತೆಗೆ ತಕ್ಕುದಾದುದಲ್ಲ. ನಾಯಿಗಳಿಗೆ ನಿಯತ್ತು ಇರುತ್ತೆ. ಸಿದ್ದರಾಮಯ್ಯ ನಿಯತ್ತಿನ ನಾಯಿಗಳನ್ನು ಬಿಟ್ಟು ಕಚ್ಚಾಡುವ ನಾಯಿಗಳನ್ನ ಸಾಕಿದ್ದಾರೆ ಎಂದು ವ್ಯಂಗ್ಯವಾಡಿದರು. ಯಡಿಯೂರಪ್ಪ ಸಿಎಂ ಆಗಿದ್ದಕ್ಕೆ ಸಿದ್ದರಾಮಯ್ಯಗೆ ಪ್ರತಿಪಕ್ಷನಾಯಕ ಸ್ಥಾನ ಸಿಕ್ಕಿರುವುದು. ಅಲ್ಲಿಯ ತನಕ ಸಿದ್ದರಾಮಯ್ಯ ಬೇರೆ ಹೆಸರಿನ ಬೇನಾಮಿ ಹೆಸರಿನ ಮನೆಯಲ್ಲಿದ್ದರು ಎಂದು ಆರೋಪಿಸಿದ್ದಾರೆ.
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ವಿಧಾನಸಭೆ ಸೇರಿದಂತೆ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸೆಣಸಲಿದೆ ಎಂದು ಬಿ.ಸಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಡಿಕೆಶಿ 17 ಶಾಸಕರು ರಾಜಕೀಯ ಸಮಾಧಿಯಾಗ್ತಾರೆ ಎಂದು ತಿಳಿಸಿದ್ದರು. ಡಿಕೆಶಿಯ ಅವರದ್ದು ತಿರುಕನ ಕನಸು, ಹಗಲು ಕನಸು ಕಾಣುತ್ತಿದ್ದಾರೆ ಎಂದು ಬಿ.ಸಿ.ಪಾಟೀಲ್ ಹೇಳಿದ್ರು.