ಹಾವೇರಿ: ಇದುವರೆಗೊ ಪ್ರತಿಪಕ್ಷದವರು ತಮ್ಮ ಪಕ್ಷವನ್ನ ಯಾವ ರೀತಿ ಬೆಳೆಸಬೇಕು ಅಂದುಕೊಂಡು ಪ್ರಯತ್ನ ಮಾಡಿದ್ದರೂ ಅದರಲ್ಲಿ ವಿಫಲರಾಗಿದ್ದಾರೆ. ಈಗ ವಿಫಲರಾಗಿರುವ ಅವರು ಹೊಸ ಹೊಸ ವರಸೆ ಆರಂಭಿಸಿದ್ದು, ಮಕ್ಕಳಲ್ಲಿ ವಿಷದಬೀಜ ಬಿತ್ತುವ ಕಾರ್ಯ ಮಾಡುತ್ತಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಆರೋಪಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಭಾನುವಾರವೇ ಸಮವಸ್ತ್ರ ಕಡ್ಡಾಯಗೊಳಿಸಿದೆ. ಶಾಲಾ - ಕಾಲೇಜಿನಲ್ಲಿ ಕಲಿಯುವ ಎಲ್ಲರೂ ಸಮಾನರು ಎನ್ನುವುದಕ್ಕೆ ಸಮವಸ್ತ್ರ ಘೋಷಣೆ ಮಾಡಲಾಗಿದೆ. ಜಾತಿ - ಧರ್ಮ, ಬಡವ-ಶ್ರೀಮಂತ ಎಂಬ ಭೇದಭಾವ ಬರದಿರಲಿ ಎಂದು ಸರ್ಕಾರ ಈ ನಿರ್ಣಯ ಕೈಗೊಂಡಿದೆ ಎಂದು ತಿಳಿಸಿದರು.
ಹಿಜಾಬ್ ವಿವಾದದ ಬಗ್ಗೆ ಹಾವೇರಿಯಲ್ಲಿ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ ಸರ್ಕಾರ ಜಾರಿಗೆ ತಂದಿರುವ ಕಾನೂನಿಗೆ ಎಲ್ಲರೂ ತಲೆಬಾಗಲೇಬೇಕು. ಇದನ್ನೇ ರಾಜಕೀಯ ಮಾಡಿಕೊಂಡು ಹೋಗುವಂತವರಿಗೆ ಪ್ರತಿಫಲ ಸಿಗುವುದಿಲ್ಲ. ಅದರಲ್ಲಿ ಅವರ ವಿಫಲಾಗುತ್ತಾರೆ. ಅದು ಅವರಿಗೆ ಮಾರಕವಾಗಲಿದೆ ಎಂದು ಬಿ.ಸಿ.ಪಾಟೀಲ್ ಎಚ್ಚರಿಸಿದರು.
ಇದನ್ನೂ ಓದಿ: ಲೋಕಸಭೆಯಲ್ಲೂ ಹಿಜಾಬ್ ಪ್ರತಿಧ್ವನಿ: ಕೇಂದ್ರ ಶಿಕ್ಷಣ ಸಚಿವರ ಮಧ್ಯಪ್ರವೇಶಕ್ಕೆ ಕೇರಳ ಕಾಂಗ್ರೆಸ್ ಸಂಸದರ ಒತ್ತಾಯ
ಸಂಪುಟ ವಿಸ್ತರಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ಈಗಾಗಲೇ ಸಿಎಂ ಬಸವರಾಜ್ ಬೊಮ್ಮಾಯಿ ಮಾರ್ಚ್ ನಂತರ ಅಂತಾ ಹೇಳಿದ್ದಾರೆ. ಈ ಪ್ರಶ್ನೆಗೆ ಸಿಎಂ ಅವರೇ ಉತ್ತರಿಸಬೇಕು, ನಾವಲ್ಲ ಎಂದರು. ಕಾಂಗ್ರೆಸ್ನಿಂದ ಹೋದವರು ಮರಳಿ ಕಾಂಗ್ರೆಸ್ಗೆ ಬರುತ್ತಾರೆ ಎನ್ನುವ ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಹೇಳಿಕೆ ಕುರಿತಂತೆ ಪ್ರಶ್ನೆಗೆ ಉತ್ತರಿಸಿದ ಬಿ.ಸಿ.ಪಾಟೀಲ್, ಈ ಪ್ರಶ್ನೆಗೆ ಎಷ್ಟು ಸಲ ಉತ್ತರಿಸಬೇಕು? ಎಲ್ಲಿ ಹೋದರು ಎಲ್ಲರೂ ಇದೇ ಪ್ರಶ್ನೆ ಕೇಳುತ್ತಿದ್ದಾರೆ ಇದಕ್ಕೆ ಎಷ್ಟು ಸಲ ಉತ್ತರ ಕೊಡಬೇಕು? ಎಂದು ಗರಂ ಆದರು.