ಹಾವೇರಿ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರಿಂದ ರಾಜ್ಯಪಾಲರ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದೆಡೆ ಡಿಕೆಶಿ ಆದಷ್ಟು ಬೇಗ ಸಿಎಂ ಆಗಬೇಕೆಂದು ಕನಸು ಕಾಣುತ್ತಿದ್ದಾರೆ. ಅಧಿಕಾರ ಕಳೆದುಕೊಂಡ ಹತಾಶೆಯಲ್ಲಿ ಕಾಂಗ್ರೆಸ್‌ನವರಿದ್ದಾರೆ. ಅವರ ಈ ನಡೆ ಮೂರ್ಖತನದ ಪರಮಾವಧಿ.
ಬೊಮ್ಮಾಯಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿರುವಾಗ ರಾಷ್ಟ್ರಪತಿ ಆಡಳಿತ ತರಬೇಕು ಅನ್ನೋರಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಕಾಂಗ್ರೆಸ್‌ನವರು ನೀರಿನಿಂದ ಹೊರ ತೆಗೆದ ಮೀನಿನಂತಾಗಿದ್ದಾರೆ. ಹಗಲುಗನಸು, ತಿರುಕನ ಕನಸಾಗುತ್ತದೆಯೇ ವಿನಃ ಅವರ ಕನಸು ನನಸಾಗದು ಎಂದರು.
ಕಾಂಗ್ರೆಸ್‌ನವರು ಕಮೀಷನ್ ತೆಗೆದುಕೊಳ್ಳೋದ್ರಲ್ಲಿ ಎಕ್ಸ್ಪರ್ಟ್ :''ಬಿಜೆಪಿ ಸರ್ಕಾರ ಪರ್ಸಂಟೇಜ್ ಸರ್ಕಾರ'' ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿ, ಡಿಕೆಶಿ ಅಥವಾ ಕಾಂಗ್ರೆಸ್ನ ಯಾರೇ ಇರಬಹುದು, ಅವರು ಕಮೀಷನ್ ತೆಗೆದುಕೊಳ್ಳೋದ್ರಲ್ಲಿ ಎಕ್ಸ್ಪರ್ಟ್. ಹೀಗಾಗಿ, ಅವರು ಕಮೀಷನ್ ಬಿಟ್ಟು ಬೇರೆ ಏನೂ ಮಾತನಾಡೋದಿಲ್ಲ. ಮಾತನಾಡೋಕೂ ಕಮೀಷನ್ ತೆಗೆದುಕೊಳ್ಳುತ್ತಾರೆಂದು ಟೀಕಿಸಿದರು.
ಗುತ್ತಿಗೆದಾರನೋರ್ವ ಕಮೀಷನ್ ಬಗ್ಗೆ ಪ್ರಧಾನಿಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವ ದೂರು ರೀ ಅದು? ಸುಮ್ಮನೆ ಬೂಟಾಟಿಕೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಪಕ್ಷದವರು ಜನರ ಗಮನ ಸೆಳೆಯಲು, ತಮ್ಮ ಪಕ್ಷ ಜೀವಂತವಾಗಿದೆ ಎಂದು ತೋರಿಸಿಕೊಳ್ಳಲು ಈ ರೀತಿಯ ವಾತಾವರಣ ಕ್ರಿಯೇಟ್ ಮಾಡ್ತಿದ್ದಾರೆ.
ಜನರು ದಡ್ಡರಲ್ಲ, ಬುದ್ಧಿವಂತರಿದ್ದಾರೆ. ಯಾರು ಏನು ಎಂದು ತಿಳಿದುಕೊಂಡು ಯಾರಿಗೆ ಗೌರವ ಕೊಡಬೇಕು, ಯಾರನ್ನು ಆಯ್ಕೆ ಮಾಡಬೇಕು ಅನ್ನೋದು ಜನರಿಗೆ ಚೆನ್ನಾಗಿ ಗೊತ್ತಿದೆ ಎಂದು ತಿಳಿಸಿದರು.
ಹಂಸಲೇಖ : ಮುಗಿದು ಹೋದ ಅಧ್ಯಾಯ ಕೆಣಕೋದು ಬೇಡ :ಸಂಗೀತ ನಿರ್ದೇಶಕ ಹಂಸಲೇಖ ಹೇಳಿಕೆಗೆ ಪ್ರತಿಕ್ರಿಯಿಸಿ, ಹಂಸಲೇಖ ಏನು ಹೇಳಿದ್ದಾರೆ ನನಗೆ ಗೊತ್ತಿಲ್ಲ. ಹಂಸಲೇಖರ ಬಗ್ಗೆ, ಸ್ವಾಮೀಜಿಗಳ ಬಗ್ಗೆಯೂ ನನಗೆ ಬಹಳ ಗೌರವವಿದೆ. ಯಾವುದೇ ವ್ಯಕ್ತಿ ತಾನು ಮಾತನಾಡಿದ್ದರ ಬಗ್ಗೆ ಪಶ್ಚಾತ್ತಾಪಪಟ್ಟರೆ, ಕ್ಷಮೆ ಕೇಳಿದ್ರೆ ಅದಕ್ಕಿಂತ ದೊಡ್ಡ ಶಿಕ್ಷೆ ಮತ್ತೊಂದಿಲ್ಲ. ಅದು ಮುಗಿದು ಹೋದ ಅಧ್ಯಾಯ, ಅದನ್ನು ಮತ್ತೆ ಕೆಣಕೋ ಅವಶ್ಯಕತೆ ಇಲ್ಲ ಎಂದರು.
ರಾಜ್ಯದಲ್ಲಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ವಿಚಾರದ ಬಗ್ಗೆ ಮಾತನಾಡಿ, ಎಲ್ಲ ಸರ್ಕಾರದಲ್ಲೂ ಎಲ್ಲ ರೀತಿಯ ಅಧಿಕಾರಿಗಳಿದ್ದಾರೆ. ಅಧಿಕಾರಿಗಳೇನು ನಮ್ಮ ಸರ್ಕಾರ ಬಂದ ತಕ್ಷಣ ಅಥವಾ ನಿನ್ನೆ, ಮೊನ್ನೆ ಹುಟ್ಟಿದವರೇನಲ್ಲ. ಆದಾಯಕ್ಕಿಂತ ಆಸ್ತಿ ಹೆಚ್ಚಾಗಿದೆಯೆಂದು ಕಂಡು ಬಂದ್ರೆ ಅವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತೇವೆ, ಎಸಿಬಿ ದಾಳಿಗಳು ಆಗುತ್ತವೆ ಎಂದು ತಿಳಿಸಿದರು.
ಇದನ್ನೂ ಓದಿ:ಹುಬ್ಬಳ್ಳಿ: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ನೀರಿನ ಡ್ರಮ್‌ನಲ್ಲಿ ಮುಳುಗಿ ಸಾವು