ಹಾವೇರಿ: ಜಿಲ್ಲಾದ್ಯಂತ ಮಂಗಳವಾರ ಮತ್ತು ಬುಧವಾರ ಸಡಗರ ಸಂಭ್ರಮದಿಂದ ಮಣ್ಣೆತ್ತಿನ ಅಮಾವಾಸ್ಯೆ ಆಚರಿಸಲಾಗುತ್ತಿದೆ. ಈ ದಿನ ರೈತ ಕುಟುಂಬಗಳು ಮಣ್ಣಿನಿಂದ ಬಸವಣ್ಣ ಮೂರ್ತಿಗಳನ್ನ ತಯಾರಿಸುತ್ತಾರೆ. ಕೆಲ ರೈತರು ಹುತ್ತದ ಮಣ್ಣಿನಿಂದ ಮೂರ್ತಿಗಳನ್ನ ತಯಾರಿಸುತ್ತಾರೆ.
ಈ ರೀತಿ ಮಣ್ಣಿನಿಂದ ತಯಾರಿಸಿದ ಎತ್ತುಗಳಿಗೆ ರೈತರು ಅಲಂಕಾರ ಮಾಡುತ್ತಾರೆ. ಬಳಿಕ ಎತ್ತುಗಳಿಗೆ ಆಹಾರ ನೀಡಲು ಗೊಂದಲಿ ಮಾಡಿ ಅದರಲ್ಲಿ ಹತ್ತಿಕಾಳು ಸೇರಿದಂತೆ ವಿವಿಧ ದವಸ ಧಾನ್ಯಗಳನ್ನ ಇಡಲಾಗುತ್ತದೆ. ದೇವರ ಜಗುಲಿ ಮೇಲೆ ಬಸವಣ್ಣನ ಮೂರ್ತಿಗಳನ್ನಿಟ್ಟು ಪೂಜೆ ಸಲ್ಲಿಸುತ್ತಾರೆ.
ಹಾವೇರಿ ಜಿಲ್ಲೆಯಾದ್ಯಂತ ಮಣ್ಣೆತ್ತಿನ ಅಮಾವಾಸ್ಯೆ ಸಂಭ್ರಮ 5 ದಿನಗಳ ಕಾಲ ಈ ಮೂರ್ತಿಗಳನ್ನು ಪೂಜಿಸಿಲಾಗುತ್ತದೆ. ನಂತರ ಕೆಲವರು ಬಾವಿ ಸೇರಿದಂತೆ ವಿವಿಧ ಜಲಮೂಲಗಳಲ್ಲಿ ಬಸಣ್ಣನ ಮೂರ್ತಿ ವಿಸರ್ಜನೆ ಮಾಡಿದರೇ, ಇನ್ನು ಕೆಲವರು ಜಮೀನುಗಳಲ್ಲಿ ಇರಿಸುತ್ತಾರೆ. ಮಣ್ಣಿನ ಬಸವಣ್ಣನಿಗೆ ಕುಚ್ಚಿದ ಕಡುಬು ಸೇರಿದಂತೆ ವಿವಿಧ ತರಹದ ಪದಾರ್ಥಗಳನ್ನ ನೈವೇದ್ಯ ಮಾಡುತ್ತಾರೆ.
ಗ್ರಾಮಗಳಲ್ಲಿ ಬಸವಣ್ಣನ ಮೂರ್ತಿ ತಯಾರಿಸುವ ಮೂಲಕ ಕಲಾವಿದರು ತಮ್ಮ ವೃತ್ತಿ ಆರಂಭಿಸುತ್ತಾರೆ. ಈ ದಿನದಿಂದ ಆರಂಭವಾಗುವ ಮಣ್ಣಿನ ಪೂಜೆ ಗಣೇಶ ಚತುರ್ಥಿವರೆಗೆ ಮುಂದುವರೆಯುತ್ತದೆ. ನಗರಗಳಲ್ಲಿ ಕುಂಬಾರರು ಮಾಡಿದ ಮಣ್ಣೆತ್ತುಗಳನ್ನು ಖರೀದಿಸಿಲಾಗುತ್ತದೆ. ಮಣ್ಣಿನಿಂದ ತಯಾರಿಸಿದ ಮೂರ್ತಿಗಳಿಗೆ ಜೋಳದ ಕಾಳು ಮತ್ತು ಭತ್ತದಿಂದ ಅಲಂಕಾರ ಮಾಡಲಾಗುತ್ತದೆ. ಮೂರ್ತಿಗಳಿಗೆ ಬಣ್ಣ ಸಹ ಬಳಿಯಲಾಗುತ್ತದೆ. ಮಣ್ಣೆತ್ತಿನ ಅಮಾವಾಸ್ಯೆ ರೈತನ ಬದುಕಿನಲ್ಲಿ ಮಣ್ಣು ಮತ್ತು ಎತ್ತುಗಳ ಮಹತ್ವವನ್ನು ಸಾರುತ್ತದೆ.
ಇದನ್ನೂ ಓದಿ:ಮಣ್ಣೆತ್ತಿನ ಅಮಾವಾಸ್ಯೆ : ಬಸವ ಮೂರ್ತಿಗಳಿಗೆ ಪೂಜೆ.. ಮಳೆ-ಬೆಳೆ ಸಮೃದ್ಧಿಯಾಗಲೆಂದು ಪ್ರಾರ್ಥನೆ