ಹಾವೇರಿ:ದೊಡ್ಡಹುಣಸೇಕಲ್ಮಠದ ಶ್ರೀಗಳು ಯಾವಾಗಲೂ ಸವಣೂರು ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುತ್ತಾರೆ. ಇಲ್ಲಿರುವ ಕೊರತೆಗಳನ್ನ ನೀಗಿಸುವ ಶಕ್ತಿ ಅವರಿಗಿದೆ. ಶಿಗ್ಗಾಂವಿ ಮತ್ತು ಸವಣೂರು ನನ್ನೆರಡು ಕಣ್ಣುಗಳಿದ್ದಂತೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸವಣೂರು ಪಟ್ಟಣದ ದೊಡ್ಡಹುಣಸೇಕಲ್ಮಠದಲ್ಲಿ ಚನ್ನಬಸವೇಶ್ವರ ಮಂಗಲ ಭವನ ಉದ್ಘಾಟನೆ ನಂತರ ಮಾತನಾಡಿದ ಅವರು, ನಮ್ಮ ಕ್ಷೇತ್ರದ ಶ್ರೀಮಂತಿಕೆ ಅಂದರೆ ರಸ್ತೆ ಮಾಡಿದ್ದು. ನಮ್ಮ ಕ್ಷೇತ್ರದಲ್ಲಿ ಸುಖ, ಸಂತೋಷದಿಂದ ಬಾಳುವ ವಾತಾವರಣ ಇದ್ದರೆ ಅದೇ ಸಂತೋಷ. ಇಡೀ ರಾಜ್ಯದ ಅಭಿವೃದ್ಧಿಯ ಜವಾಬ್ದಾರಿ ಹೊತ್ತುಕೊಂಡಿದ್ದೇನೆ. ತವರು ಮನೆಗೆ ಬಂದಂತಾಗಿದೆ. ನನ್ನ ಜವಾಬ್ದಾರಿ ರಾಜ್ಯಮಟ್ಟದಲ್ಲಿ ಎಷ್ಟು ಹೆಚ್ಚಾಗಿದೆಯೋ ಕ್ಷೇತ್ರದಲ್ಲೂ ಅಷ್ಟೇ ಹೆಚ್ಚಾಗಿದೆ ಎಂದರು.
ಜೊತೆಗೆ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನ ಮಾಡಲು ಸಂಕಲ್ಪ ಮಾಡಿದ್ದೇನೆ. ನನ್ನೆಲ್ಲಾ ನಾಯಕರು ಹಾಗೂ ಯಡಿಯೂರಪ್ಪ ಅವರ ಆಶೀರ್ವಾದದಿಂದ ರಾಜ್ಯದ ಜನರ ಸೇವೆ ಮಾಡೋ ಅವಕಾಶ ಸಿಕ್ಕಿದೆ. ನಿಮ್ಮ ವಿಶ್ವಾಸಕ್ಕೆ ಚ್ಯುತಿ ಬರದ ಹಾಗೆ ಕೆಲಸ ಮಾಡುತ್ತೇನೆ. ಗುರುಗಳ ಆಶೀರ್ವಾದ ಹಾಗೂ ನಿಮ್ಮೆಲ್ಲರ ಪ್ರೀತಿಯಿಂದ ರಾಜ್ಯದ ಅಭಿವೃದ್ಧಿ ಮಾಡ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂಗೆ ಮನವಿಗಳ ಮಹಾಪುರ
ಮಂಗಲಭವನ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸಿಎಂ ಆಗಮಿಸಿದ್ದ ವೇಳೆ ನೂರಾರು ಜನರು ನೆರೆದಿದ್ದರು. ಇದೇ ವೇಳೆ ಸಾಕಷ್ಟು ಮಂದಿ ಸಿಎಂಗೆ ಮನವಿಗಳನ್ನು ಸಲ್ಲಿಸಿದರು. ಶಾಂತಚಿತ್ತದಿಂದ ನಿಂತು ಎಲ್ಲರ ಮನವಿಗಳನ್ನ ಸ್ವೀಕರಿಸಿದ ಸಿಎಂ ಬಳಿಕ ಶಿಗ್ಗಾಂವಿ ಪಟ್ಟಣಕ್ಕೆ ತೆರಳಿದರು.