ಕರ್ನಾಟಕ

karnataka

ETV Bharat / state

ಹಾವೇರಿ: ಮಕ್ಕಳಿಲ್ಲದೆ ಪುಟಾಣಿ ರೈಲು ಉದ್ಯಾನವನ ಖಾಲಿ ಖಾಲಿ - ETV Bharat KarnatakaETV

ಹಾವೇರಿಯಲ್ಲಿ ಮಕ್ಕಳಿಗೋಸ್ಕರ ಪುಟಾಣಿ ರೈಲು ಉದ್ಯಾನವನವಿದೆ. ಎಲ್ಲಾ ಸೌಲಭ್ಯಗಳಿದ್ದರೂ ಮಕ್ಕಳು ಮಾತ್ರ ಇಲ್ಲಿಗೆ ಬರುತ್ತಿಲ್ಲ.

Putani Train Park
ಪುಟಾಣಿ ರೈಲು ಉದ್ಯಾನವನ

By

Published : Jan 22, 2023, 12:06 PM IST

Updated : Jan 22, 2023, 12:20 PM IST

"ಮೊಬೈಲ್​, ಕಂಪ್ಯೂಟರ್​ ಗೇಮ್​ಗಳಿಗೆ ಮಕ್ಕಳು ಮಾರು ಹೋಗಿದ್ದಾರೆ"

ಹಾವೇರಿ :ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪುಟಾಣಿ ರೈಲು ಉದ್ಯಾನವನ ಸ್ಧಾಪನೆಯಾಗಿ ದಶಕ ಕಳೆದಿದೆ. ಸೋಮವಾರ ಹೊರತುಪಡಿಸಿ ವಾರದ ಆರು ದಿನಗಳ ಕಾಲ ಈ ರೈಲು ಓಡುತ್ತದೆ. ಹೀಗಿದ್ದರೂ ಜಿಲ್ಲಾ ಬಾಲಭವನಕ್ಕೆ ಸಮೀಪದಲ್ಲಿರುವ ರೈಲು ಉದ್ಯಾನವನ ಇದೀಗ ಮಕ್ಕಳ ಕೊರತೆ ಎದುರಿಸುತ್ತಿದೆ.

ಪ್ರತಿದಿನ ಸಂಜೆ 4 ಗಂಟೆಯಿಂದ 6 ರವರೆಗೆ ಈ ರೈಲು ಸುಮಾರು ಎರಡು ಎಕರೆ ವಿಸ್ತೀರ್ಣದಲ್ಲಿ 300 ಮೀಟರ್ ಸಂಚರಿಸುತ್ತದೆ. ವಾರಾಂತ್ಯದ ಶನಿವಾರ ಮತ್ತು ಭಾನುವಾರ ಹೊರತುಪಡಿಸಿದರೆ ಉಳಿದ ದಿನಗಳಲ್ಲಿ ಹೇಳಿಕೊಳ್ಳುವಷ್ಟು ಮಕ್ಕಳು ಪುಟಾಣಿ ರೈಲು ಹತ್ತಲು ಬರುತ್ತಿಲ್ಲ. ಆರಂಭದಲ್ಲಿ ರೈಲು ಬ್ಯಾಟರಿ ಸಹಾಯದಿಂದ ಚಲಿಸುತ್ತಿತ್ತು. ಪದೇ ಪದೇ ದುರಸ್ಥಿಗೂ ಬರುತ್ತಿತ್ತು. ದುರಸ್ತಿ ಕಾಣದೆ ತಿಂಗಳುಗಟ್ಟಲೆ ರೈಲು ನಿಂತಲ್ಲಿ ನಿಂತಿರುವ ಉದಾಹರಣೆಗಳಿವೆ.

ಹೀಗಾಗಿ, ಬಿಡುವಿನ ವೇಳೆ ಪುಟಾಣಿ ರೈಲು ಹತ್ತಲು ಬರುತ್ತಿದ್ದ ಮಕ್ಕಳಿಗೆ ನಿರಾಸೆಯಾಗುತ್ತಿತ್ತು. ಈಗ ಡೀಸೆಲ್ ಎಂಜಿನ್ ತರಲಾಗಿದ್ದು, ಚಿಕ್ಕಪುಟ್ಟ ತೊಂದರೆಯಾದರೂ ಮೇಸ್ತ್ರಿಗಳ ಸಹಾಯದಿಂದ ದುರಸ್ತಿ ಮಾಡಲಾಗುತ್ತಿದೆ. ಹಾಗಾಗಿ, ರೈಲು ಹಿಂದಿನಂತೆ ರಿಪೇರಿಯಾಗದೆ ನಿಂತ ಉದಾಹರಣೆಯಿಲ್ಲ ಎನ್ನುತ್ತಾರೆ ಚಾಲಕರು.

ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಮತ್ತು ಕಂಪ್ಯೂಟರ್ ಗೇಮ್‌ಗಳಲ್ಲಿ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಹೀಗಾಗಿ, ಮಕ್ಕಳು ಪುಟಾಣಿ ರೈಲು ಸಂಚಾರದತ್ತ ಆಸಕ್ತಿ ತೋರಿಸುತ್ತಿಲ್ಲ ಎಂದು ಪೋಷಕರು ಹೇಳುತ್ತಾರೆ. ಉದ್ಯಾನವನಕ್ಕೆ ಮೈಸೂರು ರೈಲ್ವೆ ವಿಭಾಗದಿಂದ ಪುಟಾಣಿ ರೈಲು ತರಲಾಗಿದ್ದು ಮಕ್ಕಳಿಗೆ ತೆರೆದ ಬೋಗಿಗಳಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ.

ಪುಟಾಣಿ ರೈಲು ಇರುವ ಉದ್ಯಾನವನದಲ್ಲಿ ಸ್ವಚ್ಛತೆ ಇದೆ. ಉದ್ಯಾನವನಕ್ಕೆ ಬರುವ ಮಕ್ಕಳಿಗೆ ಅನುಕೂಲವಾಗಲೆಂದು ಚಿಣ್ಣರ ಆಟಿಕೆ ಸಲಕರಣೆಗಳನ್ನು ಇಡಲಾಗಿದ್ದು, ಪೋಷಕರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಇದೆ. ಮಕ್ಕಳಿಗೆ ಜೋಕಾಲಿ, ತಿರುಗುಣಿ, ಜಾರಗುಂಡಿ ಸೇರಿದಂತೆ ವಿವಿಧ ಆಟಗಳ ಉಪಕರಣಗಳ ವ್ಯವಸ್ಥೆ ಮಾಡಲಾಗಿದೆ. ಉದ್ಯಾನದೆಲ್ಲೆಡೆ ಹಸಿರು ಕಂಗೊಳಿಸುತ್ತಿದ್ದು ಪ್ರಾಣಿ ಮತ್ತು ಮನುಷ್ಯರ ಸಿಮೆಂಟ್ ಶಿಲ್ಪಗಳನ್ನು ನಿಲ್ಲಿಸಲಾಗಿದೆ.

ಪೋಷಕರಾದ ಭಾಗ್ಯಲಕ್ಷ್ಮಿ ಮಾತನಾಡಿ, "ಮಕ್ಕಳು ಹೆಚ್ಚಾಗಿ ಹೋಂವರ್ಕ್, ಓದಿನಲ್ಲಿ ನಿರತರಾಗಿರುತ್ತಾರೆ. ಬಿಡುವಿನ ಸಂದರ್ಭದಲ್ಲಿ ಅವರನ್ನು ಇಲ್ಲಿಗೆ ಕರೆದುಕೊಂಡು ಬರುವುದರಿಂದ ಸಂತೋಷವಾಗಿರುತ್ತಾರೆ. ದಿನನಿತ್ಯದ ಒತ್ತಡವನ್ನೂ ಮರೆಯಬಹುದು" ಎಂದರು. "ಬೆಳೆಯುತ್ತಿರುವ ನಗರೀಕರಣದ ಈ ದಿನಗಳಲ್ಲಿ ಮಕ್ಕಳಿಗೆ ಆಟವಾಡಲು ಸ್ವಚ್ಛ ಮೈದಾನ ಸಿಗುತ್ತಿಲ್ಲ. ಈ ಉದ್ಯಾನವನದಲ್ಲಿರುವ ಚಿಣ್ಣರ ರೈಲಿನಲ್ಲಿ ಕುಳಿತು ಪಯಣಿಸಿ ಆನಂದಿಸಬಹುದು" ಎಂದು ಹೇಳಿದರು.

ಪುಟ್ಟಾಣಿ ರೈಲಿನಲ್ಲಿ ಸಂಚರಿಸಲು ಚಿಕ್ಕಮಕ್ಕಳಿಗೆ 10 ರೂಪಾಯಿ ಮತ್ತು ವಯಸ್ಕರಿಗೆ 20 ರೂಪಾಯಿ ಪ್ರವೇಶದರ ನಿಗದಿಪಡಿಸಲಾಗಿದೆ. ರೈಲು ಪ್ರಯಾಣಿಕ್ಕೆ ಮಾತ್ರ ಪ್ರವೇಶದರವಿದ್ದು ಉಳಿದಂತೆ ಉದ್ಯಾನವದಲ್ಲಿ ಸಂಚರಿಸಲು, ಆಟವಾಡಲು ಮುಕ್ತ ಅವಕಾಶವಿದೆ. ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಉದ್ಯಾನವದಲ್ಲಿ ವಿಶ್ರಮಿಸಿ ಪರಿಸರ ಮತ್ತು ಸ್ವಚ್ಚತೆಯ ಪಾಠ ಹೇಳಿಕೊಡಬೇಕು ಎಂದು ಸಿಬ್ಬಂದಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಮುಂಬೈ - ಪುಣೆ ಮಾರ್ಗವಾಗಿ ಸಂಚರಿಸದ ವಂದೇ ಭಾರತ್​ ರೈಲು

Last Updated : Jan 22, 2023, 12:20 PM IST

ABOUT THE AUTHOR

...view details