ಹಾವೇರಿ: ಜಿಲ್ಲಾದ್ಯಂತ ಸುರಿದ ಧಾರಾಕಾರ ಮಳೆಯಿಂದಾಗಿ ಮೆಕ್ಕೆಜೋಳ ಬೆಳೆದ ರೈತರು ಕಂಗೆಟ್ಟು ಹೋಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಕೆಲ ದಿನಗಳಿಂದ ಸುರಿದ ಅಕಾಲಿಕ ಮಳೆ ಮೂರ್ನಾಲ್ಕು ದಿನದಿಂದ ಕಡಿಮೆಯಾಗಿದೆ. ಆದರೆ, ಮಳೆಯಿಂದ ರಕ್ಷಣೆ ಮಾಡಲು ರಾಶಿ ಹಾಕಿದ್ದ ಗೋವಿನಜೋಳದ ತೆನೆಗಳು ನೀರಿನಲ್ಲಿ ನೆನೆದು ಮೊಳಕೆ ಬಂದಿವೆ. ಪರಿಣಾಮ ಮೆಕ್ಕೆಜೋಳದ ತೆನೆಯ ರಾಶಿಯನ್ನ ನಿತ್ಯ ಬಿಸಿಲಿಗೆ ಹಾಕುವ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಸುಮಾರು 23 ಸಾವಿರ ಹೆಕ್ಟೇರ್ ಮೆಕ್ಕೆಜೋಳ ಬೆಳೆದ ಜಮೀನು ಮಳೆಯಿಂದ ಹಾನಿಯಾಗಿದೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಆದರೆ, ಇದರಿಂದ ನಮಗೆ ಯಾವುದೇ ಪ್ರಯೋಜನವಾಗಿಲ್ಲ, ಅಧಿಕಾರಿಗಳು ದಾಖಲೆ ನೀಡಿ ಎಂದು ಸತಾಯಿಸುತ್ತಿದ್ದಾರೆ. ಕೆಲ ಅಧಿಕಾರಿಗಳು ಹಾನಿಯಾದ ಪ್ರದೇಶಕ್ಕೆ ಬಂದರೂ ವಾಹನ ಬಿಟ್ಟು ಕೆಳಗೆ ಇಳಿಯುವುದಿಲ್ಲ ಎಂದು ಅನ್ನದಾತರು ಆರೋಪಿಸಿದ್ದಾರೆ.