ಹಾವೇರಿ: ಒಕ್ಕಣೆ ಮಾಡಲು ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದ ಮೆಕ್ಕೆಜೋಳದ ರಾಶಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿ ಆಗಿರೋ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಳಸೂರು ಗ್ರಾಮದಲ್ಲಿ ನಡೆದಿದೆ.
ಒಕ್ಕಣೆಗೆ ಹಾಕಿದ್ದ ಮೆಕ್ಕೆಜೋಳದ ರಾಶಿಗೆ ಬೆಂಕಿ
ಒಕ್ಕಣೆ ಮಾಡಲು ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದ ಮೆಕ್ಕೆಜೋಳದ ರಾಶಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದು, ಇದರಿಂದ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಮೆಕ್ಕೆಜೋಳ ಸುಟ್ಟು ಹಾನಿಯಾಗಿದೆ.
ಮೆಕ್ಕೆಜೋಳ ರಾಶಿಗೆ ಬೆಂಕಿ
ಗ್ರಾಮದ ಮಾರುತಿ ಕಾಳಪ್ಪನವರ ಎಂಬ ರೈತ ಐದು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದ. ಮೆಕ್ಕೆಜೋಳದ ತೆನೆಗಳನ್ನು ಒಕ್ಕಣೆ ಮಾಡಿದರಾಯ್ತು ಅಂತಾ ತನ್ನ ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದ. ತಡರಾತ್ರಿ ಯಾರೋ ಕಿಡಿಗೇಡಿಗಳು ರಾಶಿಗೆ ಬೆಂಕಿ ಹಚ್ಚಿ ಪರಾರಿ ಆಗಿದ್ದಾರೆ ಎನ್ನಲಾಗಿದೆ. ಇದರಿಂದ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಮೆಕ್ಕೆಜೋಳ ಸುಟ್ಟು ಹಾನಿಯಾಗಿದೆ.
ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಮೆಕ್ಕೆಜೋಳದ ತೆನೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.