ಹಾವೇರಿ: ದೇಶದ ವಿವಿಧ ರಾಜ್ಯಗಳಲ್ಲಿ ಜಾನುವಾರಗಳನ್ನು ಬಲಿ ಪಡೆಯುತ್ತಿರುವ ಲಂಪಿ ವೈರಸ್(Lumpy virus) ಜಿಲ್ಲೆಗೂ ಕಾಲಿಟ್ಟಿದೆ. ಈಗಾಗಲೇ ಗುಜರಾತ್, ಉತ್ತರ ಪ್ರದೇಶ ಸೇರಿದಂತೆ ಹಲವೆಡೆ ತನ್ನ ಕಬಂಧಬಾಹು ಚಾಚಿರುವ ಮಾರಕ ರೋಗ ಹಾವೇರಿ ಜಿಲ್ಲೆಯ ರೈತರ ನಿದ್ದೆಗೆಡಿಸಿದೆ. ನಗರದ ಅಕ್ಕಪಕ್ಕದ ಗ್ರಾಮಗಳ ರೈತರು ಇದೀಗ ಆತಂಕದಲ್ಲಿದ್ದಾರೆ.
ಹೌದು, ಕಳೆದ ಒಂದು ತಿಂಗಳಿಂದ ಯತ್ತಿನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಈ ರೋಗ ಕಾಣಿಸಿಕೊಂಡಿದೆ. ಜಾನುವಾರುಗಳಿಗೆ ಜ್ವರದ ಮೂಲಕ ಕಾಣಿಸಿಕೊಳ್ಳುವ ಈ ಚರ್ಮರೋಗ ಜಾನುವಾರುಗಳಲ್ಲಿ ಮೈಯಲ್ಲಿ ಗಂಟು ಗಂಟಾಗಿ ಕಾಣಿಸಿಕೊಳ್ಳುತ್ತೆ. ಅಲ್ಲದೆ, ಈ ಗಂಟುಗಳು ಒಡೆದು ರಕ್ತ ಸೋರಲಾಂಭಿಸುತ್ತಿದೆ.
ಜಾನುವಾರುಗಳ ಮೈಯಲ್ಲಿ ಚರ್ಮರೋಗದಿಂದ ಗಂಟು ಗಂಟು ಕಂಡುಬಂದಿರುವುದು ಮೊದಲ ಬಾರಿಗೆ ಜಿಲ್ಲೆಯಲ್ಲಿ ಕಾಣಿಸಿಕೊಂಡ ರೋಗ.. ಈ ರೋಗ ಬಂದ ಕೂಡಲೇ ಶಕ್ತಿಹೀನವಾಗುವ ಜಾನುವಾರುಗಳು ನೆಲದ ಮೇಲಿಂದ ಮೇಲೆ ಏಳಲು, ಮಲಗಲು ಯಾತನೆ ಅನುಭವಿಸುತ್ತವೆ. ಸ್ಥಳೀಯವಾಗಿ ಗಂಟುರೋಗ ಎಂದು ಕರೆಸಿಕೊಳ್ಳುವ ಈ ಕಾಯಿಲೆ ಈ ಹಿಂದೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೇ ಪ್ರಥಮ ಬಾರಿಗೆ ಈ ರೀತಿ ಜಾನುವಾರುಗಳಿಗೆ ಈ ರೋಗ ಕಂಡುಬಂದಿದೆ ಎನ್ನುತ್ತಾರೆ ಇಲ್ಲಿನ ರೈತರು.
ಸುಮಾರು ಲಕ್ಷಾಂತರ ರೂಪಾಯಿ ಹಣ ನೀಡಿ ಎತ್ತುಗಳನ್ನು ಖರೀದಿ ಮಾಡಿದ್ದೇವೆ. ಎತ್ತುಗಳನ್ನು ಖರೀದಿ ಮಾಡಿ ಮನೆ ಮಕ್ಕಳಂತೆ ನೋಡಿಕೊಂಡಿದ್ದೇವೆ. ಆದರೆ, ಇವುಗಳಿಗೆ ಇದೀಗ ಗಂಟುರೋಗ ಕಾಣಿಸಿಕೊಂಡಿದೆ ಎನ್ನುತ್ತಿದ್ದಾರೆ. ಈ ಗಂಟುರೋಗ ಒಂದು ಎತ್ತಿಗೆ ಕಾಣಿಸಿಕೊಂಡರೆ ಪಕ್ಕದ ಎತ್ತಿಗೂ ಹರಡುತ್ತದೆ. ಹೀಗಾಗಿ, ಗಂಟುರೋಗ ಬಂದ ಜಾನುವಾರುಗಳನ್ನು ಪ್ರತ್ಯೇಕವಾಗಿ ಕಟ್ಟುವಂತೆ ಪಶು ವೈದ್ಯರು ಸಲಹೆ ನೀಡಿದ್ದಾರೆ. ಹಸುಗಳಿಗೆ ಸಹ ರೋಗ ಕಾಣಿಸಿಕೊಂಡಿದೆ. ಗರ್ಭಿಣಿ ಹಸುಗಳಿಗೆ ಈ ರೋಗ ಬಂದರೆ ಕರು ಸಾವನ್ನಪ್ಪುವ ಸಾಧ್ಯತೆ ಹೆಚ್ಚು ಎನ್ನುತ್ತಿದ್ದಾರೆ ವೈದ್ಯರು.
ಜಾನುವಾರುಗಳಲ್ಲಿ ಚರ್ಮರೋಗದ ಸಮಸ್ಯೆ ಬಗ್ಗೆ ರೈತರು ಮಾತನಾಡಿದರು ಈ ಕುರಿತಂತೆ ರೈತರು ಹಾವೇರಿ ಜಿಲ್ಲಾ ಪಶು ಆಸ್ಪತ್ರೆಯ ವೈದ್ಯರನ್ನ ಸಂಪರ್ಕಿಸಿದ್ದಾರೆ. ಅವರು ಸಹ ಖಾಸಗಿ ಮೆಡಿಕಲ್ ಔಷಧಿ ಅಂಗಡಿಯಲ್ಲಿ ಮಾತ್ರೆ ಮತ್ತು ಔಷಧಿ ಬರೆದುಕೊಟ್ಟಿದ್ದು, ಅವುಗಳನ್ನೇ ಹಚ್ಚಬೇಕು ಎಂದು ತಿಳಿಸಿದ್ದಾರೆ. ಈ ರೋಗ ಬೇಗ ಗುಣಮುಖವಾಗುವುದಿಲ್ಲ. ಒಂದು ವಾರ ಆಸ್ಪತ್ರೆಗೆ ಬರಬೇಕು ಎಂದು ವೈದ್ಯರು ತಿಳಿಸುತ್ತಿದ್ದಾರೆ ಎನ್ನುತ್ತಿದ್ದಾರೆ ರೈತರು.
ಹೇಳತೀರದು ರೈತರ ಪಾಡು:ಮನೆಯಲ್ಲಿಯೇ ಇರುವ ಎತ್ತುಗಳಿಗೆ ಖಾಸಗಿ ಪಶು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ದಿನನಿತ್ಯ ಬರುವ ಅವರು ನಾಲ್ಕರಿಂದ ಐದು ಚುಚ್ಚುಮದ್ದು ನೀಡುತ್ತಿದ್ದಾರೆ. ಆದರೂ ಸಹ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಕುರಿತಂತೆ ರೈತರು ವೈದ್ಯರನ್ನು ಕೇಳಿದಾಗ ಇದಕ್ಕೆ ಔಷಧಿಯಿಲ್ಲ ಎನ್ನುತ್ತಾರೆ. ಅಲ್ಲದೆ, ನಾವು ಜಾನುವಾರಗಳ ಜ್ವರ ಕಡಿಮೆಯಾಗಲು ಔಷಧಿ ನೀಡುತ್ತಿದ್ದೇವೆಯೇ ಹೊರತು ಗಂಟುರೋಗಕ್ಕೆ ಅಲ್ಲ ಎನ್ನುತ್ತಾರೆ ಖಾಸಗಿ ವೈದ್ಯರು. ರೈತರ ಪಾಡು ಅಂತೂ ಹೇಳತೀರದ್ದಾಗಿದೆ.
ಒಂದು ಕಡೆ ಅಧಿಕ ಮಳೆಯಿಂದ ಬೆಳೆಹಾನಿ ಸಂಭವಿಸಿದೆ. ಇತ್ತ ಕೈಯಲ್ಲಿ ಹಣವಿಲ್ಲ, ಸಾಲ ಕೇಳಲು ಹೋದರೆ ವರ್ತಕರು ನಿಮ್ಮ ಬಳಿ ಸಾಲ ತೀರಿಸಲು ಯಾವ ಬೆಳೆ ಇದೆ ಎಂದು ಕೇಳುತ್ತಿದ್ದಾರೆ. ಆದರೂ ಸಹ ಕಷ್ಟಪಟ್ಟು ಚಿಕಿತ್ಸೆ ಕೊಡಿಸುತ್ತಿದ್ದೇವೆ. ದೇಶದ ಬೆನ್ನೆಲುಬು ರೈತನಾದರೆ, ರೈತನ ಬೆನ್ನೆಲುಬು ಜಾನುವಾರುಗಳು. ಜಾನುವಾರುಗಳಿಗೆ ಈ ರೀತಿಯಾದರೆ ಹೇಗೆ? ಎನ್ನುತ್ತಿದ್ದಾರೆ ಕೃಷಿಕರು. ಸರ್ಕಾರ ಈ ಕುರಿತಂತೆ ಕೂಡಲೇ ಕ್ರಮ ಕೈಗೊಳ್ಳಬೇಕು. ಇದು ಯಾವ ರೋಗ?. ಇದಕ್ಕೆ ಔಷಧಿ ಕಂಡುಹಿಡಿದು ರೈತರನ್ನ ರಕ್ಷಿಸುವಂತೆ ಬೇಡಿಕೊಳ್ಳುತ್ತಿದ್ದಾರೆ.
ಓದಿ:ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ.. ವೇತನ, ಭತ್ಯೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ