ಕರ್ನಾಟಕ

karnataka

ETV Bharat / state

ಹಾವೇರಿ: ಆರು ತಿಂಗಳಿನಿಂದ ಗೃಹ ಬಂಧನದಲ್ಲಿದ್ದ ಮಹಿಳೆಯ ರಕ್ಷಣೆ

ಗೃಹ ಬಂಧನದಲ್ಲಿದ್ದ ಮಹಿಳೆಯೊಬ್ಬಳನ್ನು ಹಾವೇರಿಯಲ್ಲಿ ರಕ್ಷಿಸಲಾಗಿದೆ. ಗಂಡನ ಮನೆಯವರು ಕೂಡಿ ಹಾಕಿ ಚಿತ್ರ ಹಿಂಸೆ ಕೊಡುತ್ತಿದ್ದರು ಎಂದು ಆರೋಪಿಸಿ ಮಹಿಳೆ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

Locals rescued woman from House arrest
ಗೃಹ ಬಂಧನದಲ್ಲಿದ್ದ ಮಹಿಳೆಯ ರಕ್ಷಣೆ

By

Published : Apr 7, 2021, 9:29 PM IST

ಹಾವೇರಿ : ಆರು ತಿಂಗಳಿಂದ ಗೃಹ ಬಂಧನದಲ್ಲಿದ್ದ ಗೃಹಿಣಿಯನ್ನು ಸ್ಥಳೀಯರು ರಕ್ಷಣೆ ಮಾಡಿದ ಘಟನೆ ಜಿಲ್ಲೆಯ ಬಂಕಾಪುರದಲ್ಲಿ ನಡೆದಿದೆ.

ಶಿಗ್ಗಾವಿ ತಾಲೂಕು ಬಂಕಾಪುರ ಗ್ರಾಮದ 22 ವರ್ಷದ ಜ್ಯೋತಿ ಶಡಗರವಳ್ಳಿ ಗೃಹ ಬಂಧನದಿಂದ ಪಾರಾದ ಮಹಿಳೆ. ಜ್ಯೋತಿ ಶಡಗರವಳ್ಳಿಯನ್ನು ಕಳೆದ ನಾಲ್ಕು ವರ್ಷಗಳ ಹಿಂದೆ ಶಂಭಾಜಿ ಶಡಗರವಳ್ಳಿ ಎಂಬಾತನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಆರಂಭದಲ್ಲಿ ಪ್ರೀತಿಯಿಂದಿದ್ದ ಶಂಭಾಜಿ, ನಂತರ ಜ್ಯೋತಿಗೆ ಕಾಟ ಕೊಡಲಾರಂಭಿಸಿದ್ದ. ಈತನೊಂದಿಗೆ ತಾಯಿ ತಾರಾಬಾಯಿ ಮತ್ತು ತಂದೆ ದುರ್ಗಪ್ಪ ಸೇರಿಕೊಂಡು ಜ್ಯೋತಿಯನ್ನು ಕಾಡಲಾರಂಭಿಸಿದ್ದರು. ಅಲ್ಲದೇ ಶಂಭಾಜಿಯ ಸಹೋದರಿಯರು ಬಂದಾಗಲಂತೂ ಇನ್ನಿಲ್ಲದ ರೀತಿ ಕಿರುಕುಳ ನೀಡುತ್ತಿದ್ದರು ಎಂದು ಜ್ಯೋತಿ ಆರೋಪಿಸಿದ್ದಾಳೆ.

ಗೃಹ ಬಂಧನದಲ್ಲಿದ್ದ ಮಹಿಳೆಯ ರಕ್ಷಣೆ

ಗಂಡನ ಮನೆಯವರ ಕಿರುಕುಳದಿಂದಲೇ ಮೊದಲ ಸಲ ಗರ್ಭಧರಿಸಿದ್ದ ಮಗು ಮೃತಪಟ್ಟಿತ್ತು. ಇದೀಗ 9 ತಿಂಗಳ ಮಗುವಿದ್ದು, ತನಗೂ ತನ್ನ ಮಗಳಿಗೂ ಗಂಡನ ಮನೆಯವರು ತೀವ್ರ ಕಿರುಕುಳ ಕೊಟ್ಟಿದ್ದಾರೆ. ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ. ಅಲ್ಲದೇ ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಹಾಗಾಗಿ ತಾನು ಪೊಲೀಸ್ ಠಾಣೆ ಮೆಟ್ಟಿಲೇರಿರುವುದಾಗಿ ಜ್ಯೋತಿ ತಿಳಿಸಿದ್ದಾಳೆ.

ಓದಿ : ಬಹುಭಾಷಾ ನಟ ಶರತ್​ಕುಮಾರ್ ದಂಪತಿಗೆ ಒಂದು ವರ್ಷ ಜೈಲು ಶಿಕ್ಷೆ: ಕಾರಣ?

ಕಳೆದ ಆರು ತಿಂಗಳಿಂದ ಗೃಹ ಬಂಧನಲ್ಲಿರಿಸಿ ಕಿರುಕುಳ ನೀಡಿರುವುದಾಗಿ ಪತಿ, ಅತ್ತೆ ಮತ್ತು ಮಾವನ ವಿರುದ್ಧ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಜ್ಯೋತಿ ದೂರು ದಾಖಲಿಸಿದ್ದಾಳೆ. ಹಗಲೆಲ್ಲಾ ಗೃಹ ಬಂಧನಲ್ಲಿರಿಸುತ್ತಿದ್ದ ಗಂಡನ ಮನೆಯವರು, ರಾತ್ರಿ ಬಿಡುಗಡೆ ಮಾಡಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು ಎಂದು ಜ್ಯೋತಿ ಆರೋಪಿಸಿದ್ದಾಳೆ. ರಾತ್ರಿ ವೇಳೆ ತಾನು ಓಡಾಡುವುದನ್ನು ನೋಡಿದ ಸ್ಥಳೀಯರು ಈ ಕುರಿತಂತೆ ಮಹಿಳಾ ಸಾಂತ್ವನ ಕೇಂದ್ರಕ್ಕೆ ತಿಳಿಸಿದ್ದರು. ಹಾಗಾಗಿ, ನಾನು ಹಾವೇರಿಯ ಸ್ವಧಾರಾ ಸಾಂತ್ವನ ಕೇಂದ್ರದಲ್ಲಿ ರಕ್ಷಣೆ ಪಡೆದಿದ್ದು, ನನಗೆ ಸೂಕ್ತ ನ್ಯಾಯ ಸಿಗಬೇಕು, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಜ್ಯೋತಿ ಆಗ್ರಹಿಸಿದ್ದಾಳೆ.

ABOUT THE AUTHOR

...view details