ಹಾವೇರಿ:ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಐತಿಹಾಸಿಕ ಮದಗ ಮಾಸೂರು ಕೆರೆಯಲ್ಲಿ ಹೂಳು ತುಂಬಿದ್ದು, ವರ್ಷದಿಂದ ವರ್ಷಕ್ಕೆ ಸಂಗ್ರಹವಾಗುವ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಕೆರೆ ಹೂಳು ತೆಗೆಯುವುದರ ಜತೆಗೆ ಒತ್ತುವರಿ ಮಾಡಿಕೊಂಡವರಿಂದ ತೆರವು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮದಗಮಾಸೂರು ಕೆರೆ ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದು. ಸುಮಾರು 900ಕ್ಕೂ ಅಧಿಕ ಎಕರೆ ವಿಸ್ತೀರ್ಣ ಹೊಂದಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕು ಮತ್ತು ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಮತ್ತು ಹಿರೇಕೆರೂರು ತಾಲೂಕುಗಳ ರೈತರ ಜೀವನಾಡಿ. ಮಲೆನಾಡಿನಲ್ಲಿ ಸುರಿದ ಮಳೆಯ ನೀರು ಕುಮದ್ವತಿ ನದಿಯಾಗಿ ಈ ಕೆರೆಯಲ್ಲಿ ಸೇರ್ಪಡೆಯಾಗುತ್ತದೆ. ನಂತರ ಕೆರೆ ತುಂಬಿದ ಮೇಲೆ ಅಲ್ಲಿಂದ ಜಲಪಾತವಾಗಿ ಮತ್ತೆ ಕುಮದ್ವತಿ ನದಿಯಾಗಿ ಹರಿಯುತ್ತದೆ.
ಮದಗ ಮಾಸೂರು ಕೆರೆ ಒತ್ತುವರಿ ತೆರವಿಗೆ ಸ್ಥಳೀಯರ ಆಗ್ರಹ ಆದರೆ ಕಳೆದ ಕೆಲ ವರ್ಷಗಳಿಂದ ಈ ಕೆರೆ ಒತ್ತುವರಿಗೆ ತುತ್ತಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಕೆರೆಯ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಕೆರೆಯ ದಂಡೆ ಸೇರಿದಂತೆ ಅಂಚಿನ ಭಾಗದಲ್ಲಿ ಕೆಲವರು ಸಾಗುವಳಿ ಮಾಡಿಕೊಂಡಿದ್ದಾರೆ. ಒತ್ತುವರಿಯಾದ ಜಮೀನಿನಲ್ಲಿ ಗೋವಿನ ಜೋಳ, ಬಾಳೆಗಿಡ, ಚೆಂಡು ಹೂ ಸೇರಿದಂತೆ ವಿವಿಧ ಬೆಳೆಗಳನ್ನ ಬೆಳೆದಿದ್ದಾರೆ.
ಕೆರೆ ತುಂಬಿದರೆ ಸುತ್ತಮುತ್ತ ಗ್ರಾಮಗಳ ರೈತರ ಪಂಪ್‌ಸೆಟ್‌ಗಳು ರಿಚಾರ್ಜ್ ಆಗುತ್ತವೆ. ಅಲ್ಲದೇ, ಅಂತರ್ಜಲ ಭರಪೂರವಾಗಿ ರೈತರಿಗೆ ಸಿಗುತ್ತದೆ. ಆದರೆ ಕೆರೆಯಲ್ಲಿ ನೀರು ನಿಲ್ಲಲು ಅವಕಾಶ ಮಾಡಿಕೊಡದ ಕಾರಣ ನೀರು ಹರಿದು ಹೋಗಿ ಕೆರೆ ಖಾಲಿ ಖಾಲಿಯಾಗುತ್ತದೆ. ಕೆರೆಗೆ ಸರಿಯಾದ ಒಡ್ಡು ನಿರ್ಮಿಸಿದರೆ ಸಂಗ್ರಹವಾಗುವ ನೀರಿನಿಂದ ರಟ್ಟಿಹಳ್ಳಿ ಮತ್ತು ಹಿರೇಕೆರೂರಿನ ಹಲವು ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಬಹುದಾಗಿದೆ. ಆದರೆ ನಮ್ಮ ಮನವಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಮದಗಮಾಸೂರು ಕೆರೆ ನಿಸರ್ಗ ಮಡಿಲಿನಲ್ಲಿದೆ. ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಈ ಕೆರೆಗೆ ಬರಲು ಸರಿಯಾದ ರಸ್ತೆಗಳಿಲ್ಲ. ರಟ್ಟಿಹಳ್ಳಿ ತಾಲೂಕಿನಲ್ಲಿ ಸಾಲುಮರದ ತಿಮ್ಮಕ್ಕ ಉದ್ಯಾನವನ ಸಹ ನಿರ್ಮಿಸಲಾಗಿದೆ. ಪ್ರವಾಸಿಗರು ಕೆರೆಗೆ ಆಗಮಿಸಿ ಕೆಂಚಮ್ಮನಿಗೆ ಪೂಜೆ ಸಲ್ಲಿಸಿ ಜಲಪಾತ ಸೌಂದರ್ಯ ಸವೆದು ಉದ್ಯಾನವನದಲ್ಲಿ ವಿರಮಿಸಬಹುದು. ಆದರೆ ಕೆರೆಯಲ್ಲಿ ನೀರು ಇಲ್ಲವಾದರೆ ಯಾವ ಸೌಂದರ್ಯ ಸಹ ಸವಿಯಲು ಸಿಗುವುದಿಲ್ಲ. ಆದ್ದರಿಂದ ಅಧಿಕಾರಿಗಳು ಜನಪ್ರತಿನಿಧಿಗಳು ಕೆರೆಯ ಹೊಳು ತಗೆಸಿ ಒತ್ತುವರಿ ತೆರವು ಮಾಡುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಮೈದುಂಬಿ ಹರಿಯುತ್ತಿದೆ ಐತಿಹಾಸಿಕ ಮದಗ ಮಾಸೂರು ಕೆರೆ: ವಿಡಿಯೋ