ರಾಣೆಬೆನ್ನೂರು:ಕ್ಷೇತ್ರದ ಅನರ್ಹ ಶಾಸಕ ಆರ್.ಶಂಕರ್‌ಗೆ ಸಚಿವ ಸ್ಥಾನ ಸಿಗಬೇಕೆಂದರೆ ಇನ್ನೂ ಅವರು 6 ತಿಂಗಳು ಕಾಯಬೇಕಾದ ಅನಿವಾರ್ಯತೆ ಎದುರಾಗಿದ್ದು, ಕಾರ್ಯಕರ್ತರಿಗೆ ನಿರಾಸೆ ಉಂಟು ಮಾಡಿದೆ.
ಸದ್ಯಕ್ಕಿಲ್ಲ ಆರ್.ಶಂಕರ್‌ಗೆ ಸಚಿವ ಸ್ಥಾನ: ರಾಣೆಬೆನ್ನೂರು ಬಿಜೆಪಿ ಕಾರ್ಯಕರ್ತರಿಗೆ ಮತ್ತೆ ನಿರಾಸೆ - No Ministerial position to R Shankar
ರಾಣೆಬೆನ್ನೂರು ಅನರ್ಹ ಶಾಸಕ ಆರ್.ಶಂಕರ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡುತ್ತೇವೆ ಎಂದು ಭರವಸೆ ನೀಡಿದ್ದ ಬಿಜೆಪಿ ನಾಯಕರು ಅವರಿಗೆ ಮತ್ತೊಂದು ಆಘಾತ ನೀಡಿದ್ದು, ವಿಧಾನ ಪರಿಷತ್ ನಲ್ಲಿ ಖಾಲಿ ಉಳಿದಿದ್ದ ಒಂದು ಸ್ಥಾನಕ್ಕೆ ಡಿಸಿಎಂ ಲಕ್ಷಣ ಸವದಿಯವರನ್ನು ಆಯ್ಕೆ ಮಾಡಿದ್ದಾರೆ. ಇದರಿಂದಾಗಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಆರ್.ಶಂಕರ್ ಇನ್ನೂ ಆರು ತಿಂಗಳು ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.
![ಸದ್ಯಕ್ಕಿಲ್ಲ ಆರ್.ಶಂಕರ್‌ಗೆ ಸಚಿವ ಸ್ಥಾನ: ರಾಣೆಬೆನ್ನೂರು ಬಿಜೆಪಿ ಕಾರ್ಯಕರ್ತರಿಗೆ ಮತ್ತೆ ನಿರಾಸೆ let down to R Shankar](https://etvbharatimages.akamaized.net/etvbharat/prod-images/768-512-5459788-thumbnail-3x2-hrs.jpg)
ದೊಸ್ತಿ ಸರ್ಕಾರದ ವಿರುದ್ಧ ಬಂಡಾಯವೆದ್ದು ಅನರ್ಹಗೊಂಡು ಬಳಿಕ ಕೇಸರಿ ಪಾಳಯ ಸೇರಿಕೊಂಡಿರುವ ಆರ್. ಶಂಕರ್, ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಶಂಕರ್ ಆಸೆಗೆ ತಣ್ಣೀರೆರಚಿದ ಬಿಜೆಪಿ ನಾಯಕರು, ಅರುಣ ಕುಮಾರ ಪೂಜಾರಗೆ ಟಿಕೆಟ್ ನೀಡಿದ್ದರು. ಈ ವೇಳೆ ಶಂಕರ್ ಅವರನ್ನು ಎಂಎಲ್ಸಿ ಮಾಡಿ ಸಚಿವ ಸ್ಥಾನ ನೀಡುವುದಾಗಿ ಸಿಎಂ ಬಿಎಸ್ವೈ ಸೇರಿದಂತೆ ಬಿಜೆಪಿ ನಾಯಕರು ಭರವಸೆ ನೀಡಿದ್ದರು.
ಎಂಎಲ್ಸಿಯಾಗಿ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಶಂಕರ್‌ಗೆ ಬಿಜೆಪಿ ನಾಯಕರು ಮತ್ತೊಂದು ಶಾಕ್ ಕೊಟ್ಟಿದ್ದು, ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರಿಂದ ತೆರವಾದ ಪರಿಷತ್ ಸ್ಥಾನಕ್ಕೆ ಡಿಸಿಎಂ ಲಕ್ಷ್ಮಣ ಸವದಿಅವರನ್ನು ಬಿಜೆಪಿ ಆಯ್ಕೆ ಮಾಡಿದೆ. ಇದರಿಂದ ಸದ್ಯಕ್ಕೆ ಎಲ್ಲಾ ಎಂಎಲ್ಸಿ ಸ್ಥಾನಗಳೂ ಭರ್ತಿಯಾಗಿದ್ದು, ಶಂಕರ್‌ಗೆ ಸಚಿವ ಸ್ಥಾನ ಸಿಗಬೇಕಾದರೆ ಇನ್ನೂ ಆರು ತಿಂಗಳು ಕಾಯಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಮೂಲಕ ತಮ್ಮ ನಾಯಕನಿಗೆ ಸಚಿವ ಸ್ಥಾನ ಸಿಗುತ್ತದೆ ಎಂದು ಕಾಯುತ್ತಿದ್ದ ರಾಣೆಬೆನ್ನೂರು ಬಿಜೆಪಿ ಕಾರ್ಯಕರ್ತರಿಗೆ ನಿರಾಸೆ ಉಂಟಾಗಿದೆ.