ಹಾವೇರಿ:ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೊಟಗೋಡಿಯಲ್ಲಿರುವ ಜಾನಪದ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿ 10 ವರ್ಷಗಳಾಗುತ್ತಾ ಬಂದಿದೆ. ಈ ವಿವಿ ದೇಶದ ಮೊದಲ ಹಾಗೂ ಪ್ರಪಂಚದ 2ನೇ ಜಾನಪದ ವಿವಿ ಎಂಬ ಹೆಗ್ಗಳಿಕೆ ಹೊಂದಿದೆ. ಈಗಾಗಲೇ 5 ಘಟಿಕೋತ್ಸವಗಳನ್ನು ಪೂರೈಸಿರುವ ಈ ವಿವಿಯಲ್ಲಿ ಖಾಯಂ ಸಿಬ್ಬಂದಿ ಕೊರತೆಯಿದೆ.
ಜಾನಪದ ವಿಶ್ವವಿದ್ಯಾನಿಲಯದಲ್ಲಿ ಸಿಬ್ಬಂದಿ ಕೊರತೆ ಹೌದು.. 10 ವರ್ಷ ಪೂರೈಸಲಿರುವ ಈ ವಿವಿಯಲ್ಲಿ ಇರುವ ಖಾಯಂ ಹುದ್ದೆಗಳು ಕೇವಲ ಮೂರು. ಉಳಿದಂತೆ ಗುತ್ತಿಗೆ ಅಧಾರದ ಮೇಲೆ ನೇಮಕಾತಿಯಾದವರಿದ್ದಾರೆ. ಅವರಿಗೂ ಸಹ ಸಂಬಳವಾಗದೆ ವರ್ಷ, ತಿಂಗಳುಗಳೇ ಗತಿಸಿವೆ. ಜಾನಪದ ವಿವಿ ಆರಂಭಕ್ಕೆ ತೋರಿಸಿದ ಉತ್ಸಾಹವನ್ನು ಸರ್ಕಾರ ಅಭಿವೃದ್ಧಿಗೆ ತೋರಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿವೆ.
ಕುಲಪತಿ, ಕುಲಸಚಿವ ಮತ್ತು ಮೌಲ್ಯಮಾಪನ ಕುಲಸಚಿವರನ್ನು ಬಿಟ್ಟರೆ ಉಳಿದವರೆಲ್ಲ ಗುತ್ತಿಗೆ ನೌಕರರು. ಸುಮಾರು 35 ಜನ ಗುತ್ತಿಗೆ ಅಧಾರದ ಮೇಲೆ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಗುತ್ತಿಗೆ ನೌಕರರಿಗೆ ಸಹ ಕಳೆದ ಕೆಲ ತಿಂಗಳಿಂದ ಸಂಬಳ ನೀಡಿಲ್ಲ ಎನ್ನುತ್ತಾರೆ ಇಲ್ಲಿಯ ಗುತ್ತಿಗೆ ನೌಕರರು.
2011 ಜುಲೈ 22 ರಂದು ಆರಂಭವಾದ ಜಾನಪದ ವಿವಿ ಆರಂಭದಲ್ಲಿ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿತ್ತು. ನಂತರ ಸರ್ಕಾರ ಹಲವು ಕಟ್ಟಡ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿದೆ. ಆರಂಭದಲ್ಲಿ ಕಡಿಮೆಯಿದ್ದ ವಿದ್ಯಾರ್ಥಿಗಳ ಸಂಖ್ಯೆ ಇದೀಗ ಅಧಿಕವಾಗಿದೆ. ಅಷ್ಟೇ ಅಲ್ಲದೆ ಬೋಧಿಸುತ್ತಿರುವ ವಿಷಯಗಳ ಸಂಖ್ಯೆ ಸಹ ಹೆಚ್ಚಾಗಿದೆ. ಆದರೆ ಇದಕ್ಕೆ ತಕ್ಕಂತೆ ಖಾಯಂ ಹುದ್ದೆಗಳು ಭರ್ತಿಯಾಗದಿರುವುದು ವಿವಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ.
ಸರ್ಕಾರ ಆದಷ್ಟು ಬೇಗ ಸೂಕ್ತ ಸಿಬ್ಬಂದಿ ನೇಮಕಾತಿ ಮಾಡಬೇಕಿದೆ. ಜೊತೆಗೆ ಗುತ್ತಿಗೆ ನೌಕರರ ಬಾಕಿ ಸಂಬಳ ಪಾವತಿಸಬೇಕಿದೆ.