ಹಾವೇರಿ:ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಮುಂಗಾರು ಪೂರ್ವ ಮಳೆಯಾಗಲೇ ಇಲ್ಲ. ಜೂನ್ ತಿಂಗಳಲ್ಲಿ ಬರಬೇಕಾದ ಮಳೆ ಬಂದಿದ್ದು, ಜುಲೈ ತಿಂಗಳಲ್ಲಿ ಸುರಿದಿತ್ತು. ಇದಕ್ಕಾಗಿ ಕಾದು ಕುಳಿತಿದ್ದ ರೈತರು ಮಳೆಯಾಗುತ್ತಿದ್ದಂತೆ ಜಮೀನುಗಳಲ್ಲಿ ಭರದಿಂದ ಬಿತ್ತನೆ ಕಾರ್ಯ ಮಾಡಿ ಮುಗಿಸಿದ್ದರು. ಆರಂಭದಲ್ಲಿ ಕಡಿಮೆ ಪ್ರಮಾಣದ ಬಿತ್ತನೆಯಾಗಿದ್ದು, ಜಿಲ್ಲೆಯಲ್ಲಿ ಜುಲೈ ತಿಂಗಳ ಅಂತ್ಯದವರೆಗೆ ಪ್ರತಿಶತ 97 ರಷ್ಟು ಬಿತ್ತನೆಯಾಗಿತ್ತು.
ರಾಜ್ಯದಲ್ಲಿ ಅತಿಹೆಚ್ಚು ಬಿತ್ತನೆ ಮಾಡಿದ ಜಿಲ್ಲೆ ಎಂಬ ಹೆಗ್ಗಳಿಕೆ ಸಹ ಹಾವೇರಿಯದ್ದಾಗಿತ್ತು. ಜಿಲ್ಲೆಯ ರೈತರು ಮೆಕ್ಕೆಜೋಳ, ಸೋಯಾಬಿನ್, ಶೇಂಗಾ, ಹತ್ತಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದರು. ಬೆಳೆಗಳು ಸಹ ಸಾಕಷ್ಟು ಉತ್ತಮವಾಗಿ ಬೆಳೆದಿದ್ದವು. ಆದರೆ, ಜುಲೈ ತಿಂಗಳಲ್ಲಿ ಸುರಿದಿದ್ದ ಮಳೆರಾಯ ಮತ್ತೆ ಬರಲೇ ಇಲ್ಲ. ಆಗಸ್ಟ್ ತಿಂಗಳು ಮುಗಿದು ಸೆಪ್ಟೆಂಬರ್ ಆರಂಭವಾದರೂ ಮಳೆರಾಯನ ಮುನಿಸು ಶಮನವಾಗಿಲ್ಲ. ಪರಿಣಾಮ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ಒಣಗಲಾರಂಭಿಸಿವೆ. ದಿನದಿಂದ ದಿನಕ್ಕೆ ನೆಲದ ಕಡೆ ಬಾಗುತ್ತಿರುವ ಬೆಳೆಗಳನ್ನು ನೋಡುವುದನ್ನೇ ರೈತರು ಬಿಟ್ಟಿದ್ದಾರೆ.
ಒಡನಾಡಿಗಳನ್ನೇ ಮಾರುವ ದುಸ್ಥಿತಿ.. ಇನ್ನೂ ಕೆಲವು ರೈತರು ಬೆಳೆದು ನಿಂತು ಬೆಳೆಗಳು ಮಳೆಯಿಲ್ಲದೇ ಒಣಗಲಾರಂಭಿಸಿದ್ದು, ಅವುಗಳನ್ನು ನೋಡಲಾಗದೆ ನಾಶ ಮಾಡಲಾರಂಭಿಸಿದ್ದಾರೆ. ದನಕರುಗಳನ್ನು ಜಮೀನಿಗೆ ಬಿಟ್ಟು ಇಲ್ಲವೇ ರೋಟರ್ ಮೂಲಕ ಬೆಳೆ ನಾಶ ಮಾಡುತ್ತಿದ್ದಾರೆ. ಈ ಮೂಲಕ ಹಿಂಗಾರು ಬೆಳೆಯನ್ನಾದರು ಉತ್ತಮವಾಗಿ ತಗೆಯುವ ಲೆಕ್ಕಾಚಾರದಲ್ಲಿದ್ದಾರೆ.
ಆದರೆ, ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ರೈತರು ತಮ್ಮ ಒಡನಾಡಿಗಳಾದ ರಾಸುಗಳನ್ನು ಮಾರಲು ಮುಂದಾಗುತ್ತಿದ್ದಾರೆ. ಮನೆಯಲ್ಲಿ ದನಕರುಗಳಿಗೆ ಕುಡಿಸಲು ನೀರಿಲ್ಲ, ಹಾಕಲು ಮೇವಿಲ್ಲ. ಈ ಹಿನ್ನೆಲೆಯಲ್ಲಿ ಹಸು ದನಕರುಗಳನ್ನು ಇಟ್ಟುಕೊಂಡು ಅವುಗಳಿಗೆ ಎಲ್ಲಿಂದ ನೀರು ಮೇವು ತರಬೇಕು ಎಂದು ರೈತರು ಪ್ರಶ್ನಿಸುತ್ತಿದ್ದಾರೆ.