ಕರ್ನಾಟಕ

karnataka

ETV Bharat / state

ಹಾವೇರಿ: ಕೈಕೊಟ್ಟ ಮುಂಗಾರು ಮಳೆ; ಮಾರುಕಟ್ಟೆಯಲ್ಲಿ ಜಾನುವಾರುಗಳ ಕೊರತೆ

ಪ್ರತಿ ವರ್ಷ ಮುಂಗಾರು ಹಂಗಾಮಿನ ಅವಧಿಯಲ್ಲಿ ಹಾವೇರಿ ಜಾನುವಾರು ಮಾರುಕಟ್ಟೆ ದನಗಳಿಂದ ತುಂಬಿರುತ್ತಿತ್ತು.

cattle market
ಕೈಕೊಟ್ಟ ಮುಂಗಾರು ಮಳೆ: ಮಾರುಕಟ್ಟೆಯಲ್ಲಿ ಜಾನುವಾರು ಸಂಖ್ಯೆ ಕ್ಷೀಣ..

By

Published : Jun 29, 2023, 10:29 PM IST

ಮಾರುಕಟ್ಟೆಯಲ್ಲಿ ಜಾನುವಾರು ಸಂಖ್ಯೆ ಕ್ಷೀಣ

ಹಾವೇರಿ:ಉತ್ತರ ಕರ್ನಾಟಕದ ಪ್ರಮುಖ ಜಾನುವಾರು ಮಾರುಕಟ್ಟೆಗಳಲ್ಲಿ ಹಾವೇರಿ ಜಾನುವಾರು ಮಾರುಕಟ್ಟೆಯೂ ಒಂದು. ಇಲ್ಲಿ ರಾಜ್ಯ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಿಂದ ಎತ್ತುಗಳ ಮಾರಾಟಕ್ಕೆ ರೈತರು ಆಗಮಿಸುತ್ತಾರೆ. ಪ್ರತಿ ವರ್ಷ ಜೂನ್ ಹಾಗೂ ಜುಲೈ ತಿಂಗಳು ಬಂದರೆ ಸಾಕು ಜಾನುವಾರು ಮಾರುಕಟ್ಟೆ ದನಗಳಿಂದ ತುಂಬಿರುತ್ತಿತ್ತು. ಆದರೆ, ಪ್ರಸ್ತುತ ವರ್ಷ ಹಾವೇರಿ ಜಾನುವಾರು ಮಾರುಕಟ್ಟೆ ದನಗಳ ಕೊರತೆ ಎದುರಿಸುತ್ತಿದೆ.

ಜಿಲ್ಲೆಗೆ ಮುಂಗಾರು ಮಳೆ ಆಗದೇ ಇರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಒಂದೆಡೆ ಬಿತ್ತನೆ ಮಾಡಬೇಕಿದ್ದ ರೈತರು ಸಮರ್ಪಕ ಮಳೆಯಿಲ್ಲದ ಕಾರಣ ಬಿತ್ತನೆಯೂ ಮಾಡಿಲ್ಲ. ಹಣ ನೀಡಿ ತಂದ ಬಿತ್ತನೆ ಬೀಜ ಮತ್ತು ಗೊಬ್ಬರ ರೈತರ ಮನೆಯಲ್ಲಿದೆ. ಇದ್ದ ಹಣವನ್ನೆಲ್ಲ ಬಿತ್ತನೆ ಬೀಜ, ಗೊಬ್ಬರಕ್ಕೆ ರೈತರು ಖರ್ಚು ಮಾಡಿದ್ದಾರೆ. ಎತ್ತು ಆಕಳುಗಳಿಗೆ ಸಮರ್ಪಕ ಮೇವೂ ಕೂಡ ಇಲ್ಲ. ಕುಡಿಯುವ ನೀರಿನ ಸಮಸ್ಯೆ ಕೂಡಾ ಎದುರಾಗಿದೆ.

ಅಂತರ್ಜಲ ಮಟ್ಟವೂ ದಿನ ದಿನಕ್ಕೆ ಪಾತಾಳಕ್ಕಿಳಿಯುತ್ತಿದೆ. ಇತ್ತ ಜಾನುವಾರುಗಳನ್ನು ಮಾರಾಟಕ್ಕೆ ತಂದರೆ ಅದನ್ನು ಕೊಳ್ಳಲು ಸಹ ರೈತರಿಲ್ಲ. ರೈತರಗಿಂತ ಅಧಿಕ ಸಂಖ್ಯೆಯಲ್ಲಿ ದಲ್ಲಾಳಿಗಳಿದ್ದು, ಬಾಯಿಗೆ ಬಂದ ದರ ಕೇಳುತ್ತಿದ್ದಾರಂತೆ. ಪ್ರತಿವರ್ಷ ಈ ಸಮಯಕ್ಕೆ ಬಿತ್ತನೆ ಕಾರ್ಯ ಮುಗಿದಿರುತ್ತಿತ್ತು. ಪೈರುಗಳು ಸಹ ಮೊಣಕಾಲೆತ್ತರಕ್ಕೆ ಬೆಳೆದಿರುತ್ತಿದ್ದವು. ಹಲವು ರೈತರು ತಮ್ಮ ಬೇಸಾಯ ಮುಗಿಯುತ್ತಿದ್ದಂತೆ ಜಾನುವಾರುಗಳನ್ನು ಮಾರುಕಟ್ಟೆಗೆ ತರುತ್ತಿದ್ದರು.

ಹೆಚ್ಚು ಬೆಲೆ ಇಲ್ಲದಿದ್ದರೂ ಸೂಕ್ತ ಬೆಲೆಗೆ ಮಾರಾಟ ಮಾಡುತ್ತಿದ್ದರು ಅಥವಾ ತಮಗೆ ಬೇಕಾದ ಎತ್ತು, ಆಕಳುಗಳನ್ನು ಖರೀದಿ ಮಾಡುತ್ತಿದ್ದರು. ರೈತರ ಬೆಳೆಗಳನ್ನು ನೋಡಿ ವ್ಯಾಪಾರಿಗಳು ಮುಂಗಡ ಹಣ ನೀಡುತ್ತಿದ್ದರು. ಆದರೆ, ಈ ವರ್ಷ ರೈತನ ಬಿತ್ತನೆ ಕಾರ್ಯವೇ ಮುಗಿದಿಲ್ಲ. ಈ ನಡುವೆ ರೈತನಿಗೆ ಸಾಲ ನೀಡಲು ವ್ಯಾಪಾರಿಗಳೂ ಸಹ ಮುಂದೆ ಬರುತ್ತಿಲ್ಲ. ಪರಿಣಾಮ ರೈತನ ಕೈಯಲ್ಲಿ ಹಣ ಇಲ್ಲ. ಕೈಯಲ್ಲಿ ಹಣವಿದ್ದರೆ ರೈತರು ಮಾರುಕಟ್ಟೆಗೆ ಆಗಮಿಸಿ ತಮಗೆ ಬೇಕಾದ ಜಾನುವಾರುಗಳನ್ನು ಖರೀದಿ ಮಾಡುತ್ತಿದ್ದರು.

ಅನ್ನದಾತನ ಅಳಲು:ಸ್ವಲ್ಪ ಮಳೆಯಾಗಿದ್ದರೆ ಹಸಿರು ಹುಲ್ಲಾದರೂ ರೈತರಿಗೆ ಸಿಗುತ್ತಿತ್ತು. ಆದರೆ ಪ್ರಸ್ತುತ ವರ್ಷ ಮಳೆಯಾಗದೇ ಇರುವ ಕಾರಣ ಹಸಿರು ಹುಲ್ಲೂ ಇಲ್ಲ. ಇನ್ನೂ ಒಣಮೇವಿನ ಸಂಗ್ರಹವೂ ಕಡಿಮೆಯಾಗುತ್ತಿದೆ. ಜಮೀನು ಲಾವಣಿ ಹಾಕಿಕೊಂಡ ರೈತರು ಹಣ ನೀಡಿಯಾಗಿದೆ. ಹಣ ನೀಡಿದ್ದು ಬಿಟ್ಟರೆ, ಜಮೀನುಗಳೆಡೆ ಹೋಗುವ ಮನಸ್ಸಾಗುತ್ತಿಲ್ಲ. ಉತ್ತಮ ಮಳೆಯಾಗಿದ್ದರೆ ತಮ್ಮ ಹರ್ಷ ಸಹ ಇಮ್ಮಡಿಯಾಗುತ್ತಿತ್ತು. ಆದರೆ, ಮಳೆಯಾಗದ ಕಾರಣ ಯಾವ ಕಾರ್ಯಕ್ಕೂ ಉತ್ಸಾಹ ಬರುತ್ತಿಲ್ಲ ಎನ್ನುತ್ತಾರೆ ರೈತರು.

ಮಾರುಕಟ್ಟೆಯಲ್ಲಿ ರಾಸುಗಳ ಕೊರತೆ:ಹಣ ತೀವ್ರ ಅವಶ್ಯಕವಾಗಿದ್ದವರು ಎತ್ತು, ಆಕಳುಗಳನ್ನು ಮಾರುಕಟ್ಟೆಗೆ ತಂದು ದೊರೆತ ದರಕ್ಕೆ ಮಾರುತ್ತಿದ್ದಾರೆ. ಕಳೆದ ವರ್ಷ ಜಾನುವಾರುಗಳಲ್ಲಿ ಕಾಣಿಸಿಕೊಂಡ ಚರ್ಮ ಗಂಟು ರೋಗ ಸಹ ರಾಸುಗಳ ಸಂಖ್ಯೆಯನ್ನು ಸ್ವಲ್ಪ ಕಡಿಮೆ ಮಾಡಿದೆ. ಕಳೆದ ಮೂರು ವರ್ಷ ಅಧಿಕವಾಗಿ ಬಂದ ಮಳೆ ರೈತರನ್ನು ಹೈರಾಣಾಗಿಸಿತ್ತು. ಈ ವರ್ಷ ಸರಿಯಾದ ಸಮಯಕ್ಕೆ ಮಳೆಯಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ವಿವಿಧ ಗ್ಯಾರಂಟಿ ಯೋಜನೆ ಘೋಷಿಸಿದೆ. ಜೊತೆ ರೈತರಿಗೆ ಬಿತ್ತನೆ ಬೀಜ ಸೇರಿದಂತೆ ವಿವಿಧ ಅಗತ್ಯ ವಸ್ತುಗಳು ಪೂರೈಕೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ರೈತರು ಹೇಳುತ್ತಾರೆ.

ಇದನ್ನೂ ಓದಿ:ಬರಬಾರದೇ ಮುಂಗಾರು, ನಿನ್ನ ನಂಬಿದ ಅನ್ನದಾತ ಕಂಗಾಲು..: ಬೆಳಗಾವಿಯಲ್ಲಿ ಅನ್ನದಾತನ ಬವಣೆ

ABOUT THE AUTHOR

...view details