ಹಾವೇರಿ :ಮುಂದಿನ ಮೂರು ವರ್ಷಗಳ ಕಾಲ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿರುತ್ತಾರೆ. ಉಪಚುನಾವಣೆಯ ನಂತರ ಯಾವ ಬದಲಾವಣೆಯೂ ಆಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಹಾವೇರಿಯಲ್ಲಿ ಮಾತನಾಡಿದ ಅವರು, ಸಿಎಂ ಸ್ಥಾನದ ಬಗ್ಗೆ ಶಾಸಕ ಯತ್ನಾಳರ ಹೇಳಿಕೆಯನ್ನು ನಾವು ಬಹಿರಂಗವಾಗಿ ಖಂಡಿಸಿದ್ದೇವೆ. ರಾಜ್ಯದ ಎಲ್ಲ ಕಾರ್ಯಕರ್ತರು ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಕಾಂಗ್ರೆಸ್ನಲ್ಲೂ ಸಿದ್ದರಾಮಯ್ಯ, ಡಿಕೆಶಿ, ಹೆಚ್.ಕೆ.ಪಾಟೀಲ್ ನಮ್ಮ ಮುಂದಿನ ಮುಖ್ಯಮಂತ್ರಿ ಅಂತಾರೆ. ನಮ್ಮಂತೆ ಅವರಲ್ಲಿ ಯಾರಾದರೂ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆಯೇ ಎಂದು ಪ್ರಶ್ನಿಸಿದರು.
ಅಲ್ಲದೇ ಸಿದ್ದರಾಮಯ್ಯನವರ ಚೇಲಾ ಶಾಸಕ ಜಮೀರ್ ಅಹ್ಮದ್ ಖಾನ್ ನಮ್ಮ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಹೇಳಿಕೊಂಡು ಓಡಾಡುತ್ತಿದ್ದಾನೆ. ಇತ್ತ ಕಡೆ ಶಾಸಕಿ ಸೌಮ್ಯಾರೆಡ್ಡಿ ನಮ್ಮ ಮುಂದಿನ ಸಿಎಂ ಡಿಕೆಶಿ ಅಂತಾರೆ. ಮತ್ತೊಂದೆಡೆ ಚುನಾವಣೆ ಬರಲಿ ಹೈಕಮಾಂಡ್ ಮುಖ್ಯಮಂತ್ರಿ ಯಾರು ಅನ್ನೋದನ್ನು ತೀರ್ಮಾನ ಮಾಡುತ್ತದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹೆಚ್.ಕೆ.ಪಾಟೀಲ್ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಉಪಚುನಾವಣೆ ಬಗ್ಗೆ ಮಾತನಾಡುತ್ತಾ, ಈಗಾಗಲೇ ರಾಜ್ಯದಲ್ಲಿ ನಡೆದ ಉಪಚುನಾವಣೆಗಳಲ್ಲಿ ಜನರು ಕಾಂಗ್ರೆಸ್ ಅನ್ನು ತಿರಸ್ಕಾರ ಮಾಡಿದ್ದಾರೆ. ಈಗ ಆರ್.ಆರ್.ನಗರ ಮತ್ತು ಶಿರಾ ಕ್ಷೇತ್ರದ ಉಪಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎನ್ನುತ್ತಿದ್ದಾರೆ. ಈ ಸವಾಲನ್ನು ನಾವು ಸ್ವೀಕಾರ ಮಾಡುತ್ತೇವೆ. ಈ ಉಪಚುನಾವಣೆಯಲ್ಲೂ ಹಿಂದಿನ ಮೂರು ಉಪಚುನಾವಣೆಗಳಂತೆ ಅವರು ತಿರಸ್ಕಾರ ಆಗುತ್ತಾರೆ ಎಂದು ಈಶ್ವರಪ್ಪ ಹೇಳಿದರು.