ಹಾವೇರಿ : ಕಾಂಗ್ರೆಸ್ ನಾಯಕರ ಬಗೆಗಿನ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿರುಗೇಟು ನೀಡಿದ್ದಾರೆ. ನಳೀನ್ ಕುಮಾರ ಕಟೀಲ್ ಅವರು ಮಾನಸಿಕ ಸಮತೋಲನವನ್ನ ಕಳೆದುಕೊಂಡಿದ್ದಾರೆ. ಅವರ ಮಾತುಗಳು ಅವರ ವ್ಯಕ್ತಿತ್ವವನ್ನ ತೋರಿಸುತ್ತಿದೆ ಎಂದರು.
ಕಟೀಲ್ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವಾಗ್ದಾಳಿ ನಡೆಸಿರುವುದು.. ಇಂದಿರಾ ಗಾಂಧಿ ಅವರು ದೇಶದ ಐಕ್ಯತೆಗೆ ಪ್ರಾಣ ಕೊಟ್ಟಿದ್ದಾರೆ. 16 ವರ್ಷ ಈ ರಾಷ್ಟ್ರವನ್ನು ಆಳಿ, ಇಡೀ ಪ್ರಪಂಚದಲ್ಲಿ ಉಕ್ಕಿನ ಮಹಿಳೆ ಎಂದು ಬಿರುದು ಪಡೆದಿದ್ದರು.
ವಾಜಪೇಯಿ ಅವರು ಇಂದಿರಾಗಾಂಧಿ ಅವರಿಗೆ ದುರ್ಗೆ ಎಂದು ಕರೆದಿದ್ದರು. ಇವೆಲ್ಲಾ ವಿಚಾರಗಳು ನಳಿನ್ ಕುಮಾರ ಕಟೀಲ್ ಅವರಿಗೆ ಗೊತ್ತಿಲ್ಲ ಎಂದು ಕಾಣಿಸುತ್ತದೆ ಎಂದು ಕುಟುಕಿದರು.
ರಾಜೀವ್ ಗಾಂಧಿಅವರು ದೇಶದ ಐಕ್ಯತೆಗಾಗಿ ಪ್ರಾಣಾರ್ಪಣೆ ಮಾಡಿದವರು. ಇಂತಹ ಪರಿವಾರದ ಬಗ್ಗೆ ಕಟೀಲ್ ಮಾತನಾಡಿರುವುದು ನಿಜವಾಗಿಯೂ ಕೀಳು ಭಾಷೆ. ಕಟೀಲ್ ಅವರ ಈ ಮಾತುಗಳನ್ನು ನಾನು ಖಂಡಿಸುತ್ತೇನೆ.
ಒಂದು ಪಕ್ಷದ ಅಧ್ಯಕ್ಷರಾಗಿ ಎಷ್ಟು ಮಾತಾಡಬೇಕು ಅಷ್ಟು ಮಾತಾಡಬೇಕು. ಜಾಸ್ತಿ ಮಾತನಾಡಿದರೆ ಜನ ನಗುತ್ತಾರೆ ಎಂದು ಸಲೀಂ ಅಹ್ಮದ್ ಎಚ್ಚರಿಕೆ ನೀಡಿದರು.