ಹಾವೇರಿ :ಸಂಜೆ ಐದು ಗಂಟೆ ನಂತರ ಮಹಿಳೆಯರು ಪೊಲೀಸ್ ಠಾಣೆಗೆ ಹೋಗಬೇಡಿ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ಬೇಬಿ ರಾಣಿ ಹೇಳಿದ್ದಾರೆ. ಅದರಲ್ಲೂ ಪ್ರಧಾನಿಯವರ ಸ್ವಕ್ಷೇತ್ರದಲ್ಲಿ ಇಂಥ ಹೇಳಿಕೆ ನೀಡಿದ್ದಾರೆ. ನಿಜವಾಗಿಯೂ ನಮ್ಮ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇದ್ಯಾ ಅನ್ನೋ ಅನುಮಾನ ಕಾಡ್ತಿದೆ ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯವರು ನಮ್ಮ ದೇಶದಲ್ಲಿ ಮಹಿಳೆ ರಾತ್ರಿ 12 ಗಂಟೆಗೆ ಒಬ್ಬಂಟಿಯಾಗಿ ಓಡಾಡುತ್ತಾರೋ? ಆಗ ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ ಅಂತಾ ಹೇಳಿದ್ದರು. ಈಗ ನೋಡಿದರೆ, ಸಂಜೆಯಲ್ಲಿಯೇ ಮಹಿಳೆಯರು ಪೊಲೀಸ್ ಠಾಣೆಗೆ ಹೋಗಬೇಡಿ ಎಂದು ಹೇಳಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ಈ ದೇಶದ ಹೆಣ್ಣುಮಕ್ಕಳು ಸಿಡಿದೆದ್ದು ಬಿಜೆಪಿ ವಿರುದ್ಧ ಮತ ಹಾಕಬೇಕು ಎಂದು ಕರೆಕೊಟ್ಟಿದ್ದಾರೆ.
‘ಸಂಭ್ರಮಿಸುವುದು ತರವಲ್ಲ’
ಕೇವಲ ಎರಡು ದಿನಗಳಲ್ಲಿ 100 ಕೋಟಿ ಲಸಿಕೆ ಡೋಸ್ ನೀಡಿದ್ದಕ್ಕೆ ಬಿಜೆಪಿ ಸಂಭ್ರಮ ಪಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಮಾತನಾಡಿದರು. ಸೆಲಬ್ರೇಷನ್ ಯಾವಾಗ ಮಾಡಬೇಕೆಂದರೆ, ಕೋವಿಡ್ನಿಂದ ಜನರನ್ನು ಉಳಿಸಿದ್ದಾಗ. ವೈರಸ್ಗೆ ಲಕ್ಷಾಂತರ ಜನರು ಬಲಿಯಾಗಿದ್ದಾರೆ. ಇದೀಗ ಜಾಸ್ತಿ ವ್ಯಾಕ್ಸಿನೇಷನ್ ಮಾಡಿದ್ದೇವೆ ಅಂತಾ ಸಂಭ್ರಮಿಸೋದು ತರವಲ್ಲ ಎಂದರು.