ಹಾವೇರಿ: ಬಿ.ಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಸಿ.ಎಂ. ಉದಾಸಿ ಅವರಿಗೆ ಮಂತ್ರಿ ಸ್ಥಾನ ನೀಡಿರಲಿಲ್ಲ. ಇದೇ ಕೊರಗಿನಲ್ಲಿ ಅವರು ಸಾವನ್ನಪ್ಪಿದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೆಲವರಕೊಪ್ಪ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಉದಾಸಿ ಬಗ್ಗೆ ತಮಗೆ ಮತ್ತು ತಮ್ಮ ಅಭ್ಯರ್ಥಿ ಶ್ರೀನಿವಾಸ ಮಾನೆ ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದರು.
ಭಾನುವಾರ ಸಿ.ಎಂ.ಬಸವರಾಜ ಬೊಮ್ಮಾಯಿ ಹಾನಗಲ್‌ನಲ್ಲಿ ಕಾಂಗ್ರೆಸ್ ಮುಖಂಡರ ಮೇಲೆ ಏನೇನೊ ಆರೋಪ ಮಾಡಿದ್ದಾರೆ. ಅವರು ತಮ್ಮ ಸ್ಥಾನ ಗಟ್ಟಿಮಾಡಿಕೊಳ್ಳಲು ಈ ರೀತಿ ಆರೋಪ ಮಾಡಿದ್ದಾರೆ ಎಂದು ದೂರಿದರು.
ಬಿಜೆಪಿ ಅಭ್ಯರ್ಥಿ ಸಿದ್ದರಾಮಯ್ಯ ಅವರನ್ನ ಅಲ್ಲಿನ ಜನ ಸೋಲಿಸಿ ಕೆಆರ್‌ಎಸ್‌ನಲ್ಲಿ ಎಸೆದು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ದಕ್ಷಿಣ ಭಾರತದಲ್ಲಿ ಬಿಜೆಪಿ ಹೆಬ್ಬಾಗಿಲು ತೆರೆದ ನಾಯಕ ಯಡಿಯೂರಪ್ಪರನ್ನ ನೀವು ಯಾವ ಸಮುದ್ರ, ಕೆರೆ, ಬಾವಿಗೆ ಹಾಕಿದಿರಿ? ಎಂದು ಡಿಕೆಶಿ ಪ್ರಶ್ನಿಸಿದರು.
ನಾವೆಲ್ಲಾ ಕೊರೊನಾ ಬಂದ್ಮೇಲೆ ಸಾಕಷ್ಟು ನರಳಿದ್ದೇವೆ. ಸಾವಿರಾರು ಜನ ಆಸ್ಪತ್ರೆ ಸೇರಿದರು. ಅಂಗಡಿ ಮುಂಗಟ್ಟುಗಳು ಬಂದ್ ಆದವು. ರೈತರಿಗೆ ಸೂಕ್ತ ಬೆಲೆ ಸಿಗಲಿಲ್ಲ. ನಿರುದ್ಯೋಗ ಸೇರಿದಂತೆ ಹಲವು ಸಮಸ್ಯೆಗಳು ತಾಂಡವಾಡಿದವು. ಹಣ ನೀಡ್ತೇನಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಹಣ ಹಾಕಲಿಲ್ಲ. ಇಷ್ಟೆಲ್ಲಾ ಹುಳುಕುಗಳನ್ನು ಇಟ್ಟುಕೊಂಡು ಯಾವ ಮುಖದಿಂದ ಬಿಜೆಪಿ ಪರ ಮತ ಕೇಳುತ್ತೀರಿ ಎಂದು ಪ್ರಶ್ನಿಸಿದರು.
ಕೊರೊನಾ ಸಮಯದಲ್ಲಿ ಸರ್ಕಾರಕ್ಕಿಂತ ಅಧಿಕವಾಗಿ ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಕೆಲಸ ಮಾಡಿದ್ದಾರೆ. ನಾನು ಇಂಧನ ಸಚಿವನಾಗಿದ್ದೆ. ಒಂದು ದಿನ ಕರೆಂಟ್ ಹೋಗಿರಲಿಲ್ಲ. ಈಗ ಕರೆಂಟ್ ಹೋಗ್ತಾ ಇದೆ. ಬಿಜೆಪಿ ಅವರು ಇಷ್ಟು ಸಂಸದರಿದ್ದಾರೆ. ರಾಜ್ಯದ ಮೇಕೆದಾಟು, ಕೃಷ್ಣಾ,ಮಹದಾಯಿ ಬಗ್ಗೆ ಕೇಂದ್ರ ಮುಂದೆ ಮಾತನಾಡಲಾಗುತ್ತಿಲ್ಲ ಎಂದು ಡಿಕೆಶಿ ಆರೋಪಿಸಿದರು.
ಇದನ್ನೂ ಓದಿ:ಡಿಕೆಶಿ ಬಗ್ಗೆ ಸಲೀಂ-ಉಗ್ರಪ್ಪ ಸಂಭಾಷಣೆ ವಿಚಾರ.. ಡಿ ಕೆ ಶಿವಕುಮಾರ್ ವಿರುದ್ಧ ಅಲಂ ಪಾಷ ಎಸಿಬಿಗೆ ದೂರು..