ಹಾವೇರಿ : ಸಿಎಂ ಬದಲಾವಣೆ ಶಬ್ದಕ್ಕೆ ಅರ್ಥವೇ ಇಲ್ಲ. ಯಾರು ಸಿಎಂ ಬದಲಾವಣೆ ಬಗ್ಗೆ ಮಾತನಾಡಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿರುವುದು ನಮ್ಮ ಸರ್ಕಾರದ ಗೌರವ ಹೆಚ್ಚಿಸಿದೆ. ಅತ್ಯಂತ ಪಾರದರ್ಶಕತೆಯಿಂದ ಪ್ರತಿಯೊಬ್ಬ ಸಚಿವರಿಗೂ ಮಾರ್ಗಸೂಚಿ ಹಾಕಿಕೊಟ್ಟು ಚೆನ್ನಾಗಿ ಕೆಲಸ ಮಾಡಿ ಅಂತಾ ಸೂಚಿಸಿದ್ದಾರೆ ಎಂದರು.
ಏನಾದರೂ ಲೋಪದೋಷಗಳಿದ್ದರೆ ಸರಿಪಡಿಸಿಕೊಳ್ಳಿ ಎಂದಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರ ಪಾರದರ್ಶಕ, ಪ್ರಾಮಾಣಿಕ, ಜನಪರ ಕೆಲಸ ಮಾಡಲು ಚಿಂತನೆ ಮಾಡ್ತಿದ್ದಾರೆ. ಗೌರವಾನ್ವಿತ ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರೆ ಎಂಬ ವಿಶ್ವಾಸವನ್ನ ವ್ಯಕ್ತಪಡಿಸಿದರು.
ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ. ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಅವರು ತಿಳಿಸಿದರು. ಇದೇ ವೇಳೆ ಮತಾಂತರ ಬಿಲ್ ಮಸೂದೆ ಮಂಡನೆ ಅವಶ್ಯಕತೆ ಇತ್ತಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವಶ್ಯಕತೆ ಇಲ್ಲ ಎನ್ನುವವರು ಅವಶ್ಯಕತೆ ಯಾಕೆ ಇಲ್ಲ ಎನ್ನುವುದನ್ನ ತೋರಿಸಲಿ ಎಂದು ತಿಳಿಸಿದರು.
ಎಲ್ಲ ಮತದವರು ಅವರ ಅವರ ಮತದಲ್ಲಿ ಗೌರವದಿಂದ ಇರಲಿ. ನಮ್ಮ ಬಿಲ್ ಉದ್ದೇಶ ವಂಚನೆಯ ಮತಾಂತರ ತಡೆಯುವುದಾಗಿದೆ. ಎಲ್ಲ ಧರ್ಮದವರು ಇದನ್ನ ಸ್ವಾಗತಿಸಿದ್ದಾರೆ. ಕೆಲವೆಡೆ ಸ್ವಾರ್ಥಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ನಲವತ್ತು ಪರ್ಸೇಂಟ್ ಕಮೀಷನ್ ಸರ್ಕಾರ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ಇಲಾಖೆಯಲ್ಲಿ ಒಂದು ಪರ್ಸೇಂಟ್ ತೋರಿಸಿ ಎಂದು ಆಹ್ವಾನಿಸಿದರು. ಪರೋಕ್ಷವಾಗಿ ಕಾಂಗ್ರೆಸ್ ಮುಖಂಡರ ವಿರುದ್ಧ ಮಾತನಾಡಿದ ಅವರು, ಸತ್ಯಹರಿಶ್ಚಂದ್ರನ ಮೊಮ್ಮಕ್ಕಳ ಪ್ರಶ್ನೆಗಳಿಗೆ ನಾನು ಉತ್ತರಿಸುವುದಿಲ್ಲ ಎಂದು ತಿಳಿಸಿದರು.
ಪಾರದರ್ಶಕರವಾಗಿ ಕೆಲಸ ಮಾಡುತ್ತಿದ್ದೇವೆ. ದೂರುಗಳಿದ್ದರೆ ತಿಳಿಸಿ ಸರಿಪಡಿಸಿಕೊಳ್ಳುತ್ತೇವೆ. ಬೆಳಗಾವಿ ಅಧಿವೇಶನದಲ್ಲಿ ಉತ್ತರಕರ್ನಾಟಕದ ಸಮಸ್ಯೆಗಳನ್ನ ಚರ್ಚಿಸಿದ್ದೇವೆ. ಅಧಿವೇಶನದ ಉಪಯೋಗವನ್ನ ಪ್ರತಿಪಕ್ಷದವರು ತೆಗೆದುಕೊಳ್ಳಬೇಕು. ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ಸಮಾಧಾನ ನಮ್ಮಲ್ಲಿದೆ ಎಂದು ಸಚಿವ ಪೂಜಾರಿ ಹೇಳಿದರು.
ಇದೇ 7 ರಿಂದ 10ನೇ ದಿನಾಂಕದೊಳಗೆ ಒಂದು ಹೆಲ್ಪ್ಲೈನ್ ತೆರೆಯುವ ಚಿಂತನೆಯಲ್ಲಿ ನಾವಿದ್ದೇವೆ. ಹೆಲ್ಪ್ಲೈನ್ ಆರಂಭವಾದರೆ ಅದರಲ್ಲಿ ಸಮಸ್ಯೆ ಕೇಳಿ ಅಲ್ಲಿಯ ಪರಿಹಾರ ಹುಡುಕುವುದಾಗಿ ತಿಳಿಸಿದರು. ಆಹಾರ ಪೂರೈಕೆಯಲ್ಲಿನ ಲೋಪದೋಷ ಸರಿಪಡಿಸಲು ಕ್ರಮಕೈಗೊಂಡಿದ್ದೇವೆ. ಯಾರು ಉತ್ತಮ, ಉತ್ಕೃಷ್ಟ ಆಹಾರ ಪೂರೈಸುತ್ತಾರೋ ಅವರಿಗೆ ಗುತ್ತಿಗೆ ನೀಡುವುದಾಗಿ ಅವರು ತಿಳಿಸಿದರು.
ಓದಿ:ಇವತ್ತು ಸಂಪುಟ ವಿಸ್ತರಣೆ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ: ಸಿಎಂ ಬೊಮ್ಮಾಯಿ