ಹಾವೇರಿ:ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದ ಉಪಚುನಾವಣೆ ಕಾವು ಜೋರಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಕಾದಾಟ ಜೋರಾಗಿದೆ.
ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡರು ಹಾಗೂ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ನಡುವೆ ಈ ಉಪಚುನಾವಣೆ ನೇರ ಹಣಾಹಣಿಯಾಗಿ ಮಾರ್ಪಟ್ಟಿದ್ದು, ನಾಳೆ ಇಬ್ಬರೂ ಬಲಾಬಲ ಪ್ರದರ್ಶನ ತೋರಿಸಲು ಸಿದ್ಧರಾಗಿದ್ದಾರೆ.
ನಾಳೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಈಗಾಗಲೇ ಕೆ.ಬಿ. ಕೋಳಿವಾಡ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನೂ ಬಿಜೆಪಿ ಅಭ್ಯರ್ಥಿ ಅರುಣಕುಮಾರ ರಾಜ್ಯ ನಾಯಕರ ಜತೆ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.
ಪ್ರಚಾರದಲ್ಲಿ ಕೋಳಿವಾಡ:
ಕ್ಷೇತ್ರದಲ್ಲಿ ಈಗಾಗಲೇ ಕೆ.ಬಿ. ಕೋಳಿವಾಡ ಒಂದು ಸುತ್ತ ಪ್ರಚಾರ ನಡೆಸಿದ್ದು, ಬಿಜೆಪಿ ಅಭ್ಯರ್ಥಿ ಚುನಾವಣೆಗೆ ಸಿದ್ಧವಾಗಿದ್ದಾರೆ. ಕ್ಷೇತ್ರದಿಂದ ಸತತವಾಗಿ 13 ಬಾರಿ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. 5 ಬಾರಿ ಗೆಲವು ಸಾಧಿಸಿರುವ ಕೋಳಿವಾಡರು 6ನೇ ಬಾರಿ ಈ ಉಪಚುನಾವಣೆಯಲ್ಲಿ ಗೆಲ್ಲಲು ರಣತಂತ್ರ ರೂಪಿಸುತ್ತಿದ್ದಾರೆ. 50 ವರ್ಷದ ರಾಜಕೀಯ ಅನುಭವ, ಕ್ಷೇತ್ರದ ಜನರ ನಾಡಿಮಿಡಿತ ಚೆನ್ನಾಗಿ ತಿಳಿದಿರುವ ಕೋಳಿವಾಡರು ಕ್ಷೇತ್ರದ ಹಿಡಿತ ಹೊಂದಿದ್ದಾರೆ. ಈ ಬಾರಿ ಕೊನೆಯ ಚುನಾವಣೆ ಎಂದು ಘೋಷಿಸಿರುವ ಕೋಳಿವಾಡರಿಗೆ ಜನರು ಅನುಕಂಪ ಸಿಗಲಿದೆ ಎಂಬುದು ಮತದಾರನ ಮಾತು.
ಅರುಣಕುಮಾರಗೆ ರಾಜಕೀಯ ಅನುಭವದ ಕೊರತೆ:
ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅರುಣಕುಮಾರ ಪೂಜಾರಗೆ ರಾಜಕೀಯ ಅನುಭವ ಕಮ್ಮಿ. 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸುಮಾರು 9,000 ಮತಗಳನ್ನು ಪಡೆದಿದ್ದರು. ಈಗ ಅರುಣಕುಮಾರಗೆ ಲಿಂಗಾಯತ ಮತಗಳು ವರ್ಕೌಟ್ ಆಗುತ್ತವೆ ಎಂಬ ಲೆಕ್ಕಾಚಾರ ಹೊಂದಿದ್ದಾರೆ. ಆದರೆ ಲಿಂಗಾಯತ ಮತಗಳು ವಿಭಜನೆಯಾಗುತ್ತವೆ ಎಂಬುದು ಮುಖಂಡರ ಲೆಕ್ಕಾಚಾರವಾಗಿದೆ.