ಹಾವೇರಿ:ತಾಲೂಕಿನ ಕೋಳೂರು ಮತ್ತು ಗಣಜೂರು ಗ್ರಾಮಗಳ 407 ಎಕರೆ ಜಮೀನು ವಶಪಡಿಸಿಕೊಳ್ಳಲು ಕೆಐಡಿಬಿ ಮುಂದಾಗಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ. ಎರಡು ಗ್ರಾಮಗಳ ಹಲವು ರೈತರ ಜಮೀನು ವಶಪಡಿಸಿಕೊಳ್ಳಲು ಕೆಐಡಿಬಿ 10 ವರ್ಷಗಳಿಂದ ಪ್ರಯತ್ನ ನಡೆಸುತ್ತಿದೆ. ಆದರೆ ಇಲ್ಲಿಯ ರೈತರು ಮಾತ್ರ ಯಾವುದೇ ಕಾರಣಕ್ಕೂ ಭೂಮಿ ನೀಡುವುದಿಲ್ಲಾ ಎಂದು ಪಟ್ಟುಹಿಡಿದಿದ್ದಾರೆ.
407 ಎಕರೆಯಲ್ಲಿ ಕೊನೆಯಲ್ಲಿರುವ 40 ಎಕರೆ ಜಮೀನಿನಲ್ಲಿ ಹಲವು ರೈತರು ಪೇರಲ ಬೆಳೆಯುತ್ತಿದ್ದಾರೆ. ಪೇರಲ ಗಿಡಗಳು ಈಗ ದೊಡ್ಡದಾಗಿದ್ದು, ವರ್ಷಕ್ಕೆ ಒಂದು ಗಿಡದಿಂದ ಕ್ವಿಂಟಾಲ್ಗೂ ಅಧಿಕ ಪೇರಲ ಹಣ್ಣು ಪಡೆಯುತ್ತಿದ್ದಾರೆ. ನಲವತ್ತು ಎಕರೆ ಪೇರಲ ತೋಟದಲ್ಲಿ 10ಕ್ಕೂ ಅಧಿಕ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲದೆ ನೂರಕ್ಕೂ ಅಧಿಕ ಕಾರ್ಮಿಕರಿಗೆ ಈ ತೋಟಗಳಲ್ಲಿ ಉದ್ಯೋಗ ಸಿಕ್ಕಿದೆ.
407 ಎಕರೆ ಜಮೀನು ವಶಕ್ಕೆ ಮುಂದಾದ ಕೆಐಡಿಬಿ ವರ್ಷಕ್ಕೆ ಒಂದು ಎಕರೆಯಿಂದ ಕನಿಷ್ಠ 5 ಲಕ್ಷ ರೂಪಾಯಿ ಆದಾಯವನ್ನು ಪೇರಲ ಬೆಳೆಗಾರರು ಪಡೆಯುತ್ತಿದ್ದಾರೆ. ಇಂತದರಲ್ಲಿ ಕೆಐಡಿಬಿ 25 ಲಕ್ಷ ರೂಪಾಯಿ ಪರಿಹಾರ ನೀಡಿ ಜಮೀನು ಕಬಳಿಸಲು ಮುಂದಾಗಿದೆ. 25 ಲಕ್ಷ ಅಲ್ಲಾ, 25 ಕೋಟಿ ರೂಪಾಯಿ ಹಣ ನೀಡಿದರೂ ನಾವು ಜಮೀನನ್ನು ಬಿಟ್ಟುಕೊಡಲು ಸಿದ್ಧರಿಲ್ಲ ಎನ್ನುತ್ತಿದ್ದಾರೆ ಇಲ್ಲಿನ ರೈತರು.
ಇಲ್ಲಿ ಬೆಳೆದ ಪೇರಲ ಗೋವಾ, ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಿಗೆ ರಫ್ತಾಗುತ್ತದೆ. ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ ಆದಾಯ ಕುಸಿದಿತ್ತು. ಆದರೆ ಇದೀಗ ಒಳ್ಳೆಯ ಬೆಲೆ ಇದೆ. ಪೇರಲ ಗಿಡಗಳು ಸಹ ಫಲದಿಂದ ತುಂಬಿಕೊಂಡಿದ್ದು, ಭಾರ ತಡೆಯದೆ ನೆಲದ ಕಡೆ ಬಾಗಿವೆ. ಕಳೆದ 10 ವರ್ಷದಿಂದ ಕೆಐಡಿಬಿ ಭೂಸ್ವಾಧೀನ ವಿರೋಧಿಸಿ ಹಲವು ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಇಲ್ಲಿಯ ರೈತರು ಮನವಿ ಸಲ್ಲಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲವಂತೆ.
10 ವರ್ಷಗಳಿಂದ ಈ ರೈತರ ಮೇಲೆ ಭೂಸ್ವಾಧೀನದ ಕತ್ತಿ ತೂಗುತ್ತಿದೆ. ಸರ್ಕಾರ 407 ಎಕರೆ ಫಲವತ್ತಾದ ಭೂಮಿ ಕೈಬಿಟ್ಟು ಬೇರೆ ಕಡೆ ಕೈಗಾರಿಕೆಗಳನ್ನು ಸ್ಥಾಪಿಸಲಿ. ಅದನ್ನು ಬಿಟ್ಟು ಫಲವತ್ತಾದ ಜಮೀನು ಮೇಲೆ ಕಣ್ಣೇಕೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಕೊನೆಯ ಪಕ್ಷ ಪೇರಲ ತೋಟ ಇರುವ 40 ಎಕರೆ ಜಮೀನು ಭೂಸ್ವಾಧೀನ ಕೈಬಿಡಬೇಕು. ಇಲ್ಲದಿದ್ದರೆ ತಮಗೆ ದಯಾಮರಣ ಕಲ್ಪಿಸಬೇಕು. ಸಿಎಂ ಬಸವರಾಜ ಬೊಮ್ಮಾಯಿ ನಮ್ಮ ಜಿಲ್ಲೆಯವರಾಗಿದ್ದಾರೆ. ಅವರಾದರೂ ತಮ್ಮ ಸಮಸ್ಯೆಗೆ ಸ್ಪಂದಿಸಬೇಕು ಎನ್ನುತ್ತಿದ್ದಾರೆ ಇಲ್ಲಿಯ ರೈತರು.
ಇದನ್ನೂ ಓದಿ :ಕೈಗಾರಿಕೆ ಸ್ಥಾಪನೆಗೆ ಭೂಸ್ವಾಧೀನ: ಆತಂಕದಲ್ಲಿ ಕರಾವಳಿಯ ಮೂರು ಗ್ರಾಮಗಳ ಜನತೆ