ಹಾವೇರಿ:ತಾಲೂಕಿನ ಕೊಳೂರು ಗ್ರಾಮದ ರೈತರು ಇದೀಗ ಆತಂಕದಲ್ಲಿದ್ದಾರೆ. ಇವರ ಆತಂಕಕ್ಕೆ ಕಾರಣ ಫಲವತ್ತಾದ ಭೂಮಿಯನ್ನು ಕೆಐಎಡಿಬಿಯವರು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದು. ಸುಮಾರು 450 ಎಕರೆ ಭೂಮಿಯನ್ನು ಕೆಐಎಡಿಬಿ ಕೈಗಾರಿಕೆ ಸ್ಥಾಪನೆ ಮಾಡಲು ವಶಪಡಿಸಿಕೊಳ್ಳಲು ಮುಂದಾಗಿದೆ. ಈ ಭೂಮಿ ಅತ್ಯಂತ ಫಲವತ್ತಾಗಿದ್ದು ಸಾವಿರಾರು ಜನ ಇಲ್ಲಿ ಭೂಮಿಯನ್ನು ಆಶ್ರಯಿಸಿದ್ದಾರೆ. ಪೇರಲ, ಚಿಕ್ಕು, ಮಾವು, ತೆಂಗು ಬೆಳೆಯನ್ನು ರೈತರು ಬೆಳೆದಿದ್ದು ಕೆಐಎಡಿಬಿ ಭೂಮಿ ಸ್ವಾಧೀನಕ್ಕೆ ಮುಂದಾದರೆ ಪ್ರಾಣವನ್ನಾದರೂ ನೀಡುತ್ತೇವೆಯೇ ಹಾರತು ಭೂಮಿ ನೀಡಲಾರೆವು ಎನ್ನುತ್ತಿದ್ದಾರೆ ಇಲ್ಲಿನ ರೈತರು.
2009ರಲ್ಲಿ ಇಲ್ಲಿಯ ಭೂಮಿ ಸ್ವಾಧೀನಕ್ಕೆ ಮುಂದಾಗಿದ್ದ ಕೆಐಎಡಿಬಿ ನಂತರ ಕಾರಣಾಂತರದಿಂದ ಹಿಂದೆ ಸರಿದಿತ್ತು. ಆದರೀಗ ಮತ್ತೆ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದು ರೈತರಿಗೆ ನೋಟೀಸ್ ನೀಡಿದೆ. ಕೆಐಎಡಿಬಿ ಈ ರೀತಿ ನೋಟಿಸ್ ನೀಡಿರುವುದು ರೈತರ ನಿದ್ದೆಗೆಡಿಸಿದೆ. ಕೆಐಎಡಿಬಿ ಸ್ವಾಧೀನಕ್ಕೆ ಮುಂದಾಗಿರುವ 450 ಎಕರೆ ಭೂಮಿ ಫಲವತ್ತಾಗಿದೆ. ಇದರ ಸಮೀಪದಲ್ಲಿಯೇ ವರದಾ ನದಿ ಹರಿಯುತ್ತಿದ್ದು ರೈತರಿಗೆ ಅನುಕೂಲಕರವಾಗಿ ಪರಿಣಮಿಸಿದೆ.