ಲಿಂಗತ್ವ ಅಲ್ಪಸಂಖ್ಯಾತೆ ಕೆಸಿ ಅಕ್ಷತಾ ಹಾವೇರಿ:ಹೆಸರಾಂತ ಪ್ರಗತಿಪರರು ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನದಿಂದ ಹಿಂದೆ ಸರಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಸಹ ಸಾಹಿತ್ಯ ಸಮ್ಮೇಳನದ ಸಂಕಿರ್ಣ ಗೋಷ್ಠಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಲಿಂಗತ್ವ ಅಲ್ಪಸಂಖ್ಯಾತೆ ಕೆ ಸಿ ಅಕ್ಷತಾ ಹೇಳಿದರು.
ಹಾವೇರಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನ ಸಾಮರಸ್ಯ ಸಾರುವ ವೇದಿಕೆಯಾಗಬೇಕಿತ್ತು. ಆದರೆ ಸಮ್ಮೇಳನದ ವೇದಿಕೆ ಒಂದು ವ್ಯವಸ್ಥೆಯ ಪರ ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿದರು. ಒಂದು ಪಕ್ಷದ ಒಂದು ಸಿದ್ಧಾಂತದ ಪರ ಇರುವ ಸಮ್ಮೇಳನದಿಂದ ನಾನು ಹೊರಗೆ ಉಳಿಯುತ್ತೇನೆ ಎಂದರು.
ದಮನಿತರು, ಅಹಿಂದ ಹೋರಾಟಗಾರರ ಮತ್ತು ರೈತರ ಪರವಾದ ಸಮ್ಮೇಳನವನ್ನು ಮುಂದಿನ ದಿನಗಳಲ್ಲಿ ಹಾವೇರಿಯಲ್ಲಿ ಸಮಾನ ಮನಸ್ಕರ ಒಕ್ಕೂಟ ನಡೆಸಲಿದೆ. ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಅವರು ನಾಡಿನ ಅಸ್ಮಿತೆ ಸಾರಿರುವ ಪುರುಷೋತ್ತಮ ಬಿಳಿಮಲೆ ಮೇಲೆ ಮಾಡಿರುವ ಆರೋಪವನ್ನು ಖಂಡಿಸುತ್ತೇನೆ. ಸಾಹಿತ್ಯ ಸಮ್ಮೇಳಕ್ಕೆ ಒಂದು ಪರಂಪರೆ ಇತ್ತು. ಆದರೆ ಹಾವೇರಿಯಲ್ಲಿ ಇದೇ ಜ.6 ರಿಂದ 8 ವರೆಗೆ ನಡೆಯಲಿರುವ ಸಾಹಿತ್ಯ ಸಮ್ಮೇಳನ ದುರಂತ ಸಮ್ಮೇಳನ ಎಂದು ಅವರು ಅಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್, ಕಸಾಪ ರಾಜ್ಯಾಧ್ಯಕ್ಷರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಪುರುಷೋತ್ತಮ ಬಿಳಿಮಲೆ ಮೇಲೆ ಮಾಡಿರುವ ಆರೋಪವನ್ನು ಸಾಬೀತುಪಡಿಸಬೇಕು. ಅವರು ಆರೋಪ ಸಾಬೀತುಪಡಿಸಿದರೆ ಬಿಳಿಮಲೆ ವಿರುದ್ಧ ನಿಲ್ಲುತ್ತೇವೆ. ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಮಹೇಶ ಜೋಷಿ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಪ್ರೋಫೆಸರ್ ಬಿಳಿಮಲೆ ಮೇಲೆ ಆರೋಪ ಮಾಡುವ ಮೂಲಕ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ಚಿಂತಕ ಪುರುಷೋತ್ತಮ ಬಿಳಿಮಲೆ ಕುರಿತು ಮಹೇಶ್ ಜೋಷಿ ಪ್ರತಿಕ್ರಿಯೆ:ಚಿಂತಕ ಪುರುಷೋತ್ತಮ ಬಿಳಿಮಲೆ ಅವರು 86ನೇ ಸಾಹಿತ್ಯ ಸಮ್ಮೇಳನದ ಶಾಮಿಯಾನ ಹಾಕುವ ಕೆಲಸವನ್ನು ತಾವು ಸೂಚಿಸುವ ವ್ಯಕ್ತಿಗೆ ನೀಡಬೇಕು ಎಂದು ತಿಳಿಸಿದ್ದರು. ಆದರೆ ನಾವು ಆ ರೀತಿ ಮಾಡದಿರುವುದಕ್ಕೆ ಇದೀಗ ಜನಸಾಹಿತ್ಯ ಮಾಡಲು ಮುಂದಾಗಿದ್ದಾರೆ ಎಂದು ಕಸಾಪ (ಕನ್ನಡ ಸಾಹಿತ್ಯ ಪರಿಷತ್) ಅಧ್ಯಕ್ಷ ಮಹೇಶ್ ಜೋಷಿ ಹೇಳಿದ್ದರು.
ಮುಸ್ಲಿಂ ಪ್ರತಿರೋಧವಾದಿ ಜನಸಾಹಿತ್ಯ ಸಮ್ಮೇಳನ ನಡೆಸಲು ಮುಂದಾಗಿರುವ ಪುರುಷೋತ್ತಮ ಬಿಳಿಮಲೆಯವರು ಹೇಳಿದ ಕೆಲಸ ಮಾಡದಿರುವುದೇ ಅವರು ಈ ರೀತಿ ಆರೋಪ ಮಾಡಲು ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಮುಸ್ಲಿಮರಿಗೆ ಅವಕಾಶ ಸಿಕ್ಕಿಲ್ಲ ಎನ್ನುವುದಕ್ಕೆ ಇದು ಕನ್ನಡ ಸಾಹಿತ್ಯ ಸಮ್ಮೇಳನವೇ ಹೊರತು ಯಾವುದೇ ಜಾತಿ, ಧರ್ಮದ ಸಮ್ಮೇಳನವಲ್ಲ. ಇಲ್ಲಿ ಮಾನದಂಡ ಕನ್ನಡ ಮಾತ್ರ ಎಂದು ಸ್ಪಷ್ಟಪಪಡಿಸಿದ್ದರು. ನಾನು ಯಾವುದೇ ಆರೋಪಗಳಿಗೆ ಹೆದರುವವನಲ್ಲ. ಆರೋಪಗಳಿಗೆ ಪ್ರತಿನಿಂದನೆ ವ್ಯಕ್ತಪಡಿಸುವುದು ಪರಿಷತ್ತಿನ ಘನತೆ ಗೌರವವೂ ಅಲ್ಲ. ಆದರೆ, ಸುಳ್ಳು ಪ್ರಚಾರಕ್ಕಾಗಿ ಮುಂದಾದಾಗ ಉತ್ತರಿಸಬೇಕಾಗಿದ್ದು, ದಾಖಲೆ ಸಮೇತ ಮಾಧ್ಯಮದ ಮುಂದೆ ಬಂದಿದ್ದೇನೆ ಎಂದು ಜೋಷಿ ತಿಳಿಸಿದ್ದರು.
ಪುರುಷೋತ್ತಮ ಬಿಳಿಮಲೆ, ಹನೀಫ್ ಮತ್ತು ಆರ್.ಜೆ.ಹಳ್ಳಿ ನಾಗರಾಜ್ ನನ್ನ ಜೊತೆ ಅನ್ಯೋನ್ಯವಾಗಿದ್ದವರು. ಹನೀಫ್ ಮಾಧ್ಯಮದಲ್ಲಿದ್ದವರು. ಅವರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಅದೇ ರೀತಿ ಅವರು ನಡೆದುಕೊಳ್ಳಬೇಕು. ಸಾಮಾಜಿಕ ಜವಾಬ್ದಾರಿ ಮರೆತು ಮಾಡಿರುವ ಕೆಲಸಕ್ಕೆ ನಾನು ಖಂಡನೆ ವ್ಯಕ್ತಪಡಿಸುತ್ತೇನೆ. ಮುಸ್ಲಿಮರಲ್ಲಿ ಯಾರೂ ಸಾಧಕರಿಲ್ಲವೇ ಎಂದು ಹನೀಫ್ ಪ್ರಶ್ನಿಸಿದ್ದು, ಮಾಧ್ಯಮ ಪ್ರತಿನಿಧಿ ರಾಜು ನದಾಫ್ ಯಾವ ಧರ್ಮದವರು ಎಂದು ಅವರೇ ಉತ್ತರಿಸಬೇಕು. ಏನಾದರೂ ಆಗು ಮೊದಲು ಮಾನವನಾಗು ಎನ್ನುವ ಅಸ್ಮಿತೆ ಕಸಾಪದ್ದು ಮತ್ತು ಸಮ್ಮೇಳನದ್ದು. ಆದರೆ ಈ ಮೂವರು ಏನಾದರೂ ಆಗು ಮೊದಲು ಮುಸ್ಲಿಮನಾಗು ಎನ್ನುತ್ತಿದ್ದಾರೆ. ಪ್ರಗತಿಪರ ಚಿಂತಕರು ಪೂರ್ವಾಗ್ರಹ ಪೀಡಿತರಾಗಿದ್ದಾರೆ ಎಂದು ಮಹೇಶ ಜೋಷಿ ಆರೋಪಿಸಿದ್ದರು.
ಇದನ್ನೂ ಓದಿ:ಸಾಹಿತ್ಯ ಸಮ್ಮೇಳನಕ್ಕೆ ಸ್ಥಳ ನಿಗದಿ, ಲಾಂಛನದಲ್ಲಿ ಸ್ವಲ್ಪ ಮಾರ್ಪಾಡು: ಮಹೇಶ್ ಜೋಷಿ