ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯೋದು ಅನುಮಾನ! - ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಮಹೇಶ್​ ಜೋಶಿ ಹೇಳಿಕೆ

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕ ನಿಗದಿಯಾಗಿದ್ದರೂ, ಈ ವರೆಗೆ ಸಮ್ಮೇಳನದ ಯಾವುದೇ ತಯಾರಿಗಳು ನಡೆದಿಲ್ಲ ಎಂದು ಕಸಾಪ ಅಧ್ಯಕ್ಷರು ಬೇಸರ ವ್ಯಕ್ತ ಪಡಿಸಿದ್ದಾರೆ.

Kn_hvr_01_
ಕಸಾಪ ಅಧ್ಯಕ್ಷ ಮಹೇಶ್​ ಜೋಶಿ

By

Published : Oct 3, 2022, 3:34 PM IST

ಹಾವೇರಿ:ಹಾವೇರಿಯಲ್ಲಿ ಘೋಷಿತ ದಿನಾಂಕದಂದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯೋದು ಅನುಮಾನ ಎಂದು ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಸಂಶಯ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ನವಂಬರ್ 11,12 ಮತ್ತು 13ರಂದು ಸಾಹಿತ್ಯ ಸಮ್ಮೇಳನ ದಿನಾಂಕ ಘೋಷಣೆ ಆಗಿದೆ. ಸಮ್ಮೇಳನದ‌ ಘೋಷಿತ ದಿನಾಂಕಕ್ಕೆ ಇನ್ನೂ ಒಂದು ತಿಂಗಳು ಏಳು ದಿನಗಳು ಮಾತ್ರ ಬಾಕಿ ಇವೆ. ಸಮ್ಮೇಳನದ ಪೂರ್ವದಲ್ಲಿ ಸಮ್ಮೇಳನದ ಲಾಂಛನ ಬಿಡುಗಡೆ ಆಗಬೇಕು, ಸ್ವಾಗತ ಸಮಿತಿ ಸೇರಿದಂತೆ ಇಪ್ಪತ್ತು ಸಮಿತಿಗಳು ರಚನೆ ಆಗಬೇಕು.

ಕನ್ನಡ ಸಾಹಿತ್ಯ ಸಮ್ಮೇಳನ ಕುರಿತು ಮಹೇಶ್​ ಜೋಶಿ ಹೇಳಿಕೆ

ವಸತಿ ವ್ಯವಸ್ಥೆ, ಪ್ರತಿನಿಧಿಗಳ ನೋಂದಣಿ ಆಗಬೇಕು. ಈವರೆಗೆ ಯಾವುದೇ ಕೆಲಸವೂ ಆಗಿಲ್ಲ ಸಮ್ಮೇಳನದ ವಿಚಾರದಲ್ಲಿ ಸರಕಾರ ಮತ್ತು ಜಿಲ್ಲಾಡಳಿತದ ನಡತೆಯ ಬಗ್ಗೆ ನಮಗೆ ತೀವ್ರ ಅಸಮಾಧಾನ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಸ್ವಾಯತ್ತ, ಸ್ವಾಭಿಮಾನದ‌ ಸಂಸ್ಥೆ. ಸಿಎಂ ಅವರ ಮನೆ ಕಾಯುವ ಅಧ್ಯಕ್ಷ ನಾನಾಗುವುದಿಲ್ಲ ಎಂದು ಜೋಶಿ ಅಸಮಾಧಾನ ಹೊರಹಾಕಿದರು.

ಸಿಎಂ ಅವರು ಮತ್ತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾದ ನಾನು ಇದೇ ಜಿಲ್ಲೆಯವರು. ತವರು ಜಿಲ್ಲೆಯಲ್ಲಿ ಸಮ್ಮೇಳನ ನಡೆಸೋ ಬಗ್ಗೆ ಸಾಕಷ್ಟು ಉತ್ಸುಕತೆ ಹೊಂದಿದ್ದೆ, ಆದರೇ ನಮಗೆ ಸಹಕಾರ ಸಿಗ್ತಿಲ್ಲ. ಸಮ್ಮೇಳನ ನಡೆಸಲು ಮೊದಲು ಇದ್ದ ಉತ್ಸಾಹ ಈಗ ಕಡಿಮೆ ಆಗ್ತಿದೆ ಎಂದರು.

ಹಾವೇರಿಯಲ್ಲಿ ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ಸಮ್ಮೇಳನ ಮಾಡಿ ಅನ್ನೋದು ಕಸಾಪ ನಿಲುವಾಗಿದೆ. ನಮ್ಮ ವ್ಯವಸ್ಥೆ ನಾವು ಮಾಡಿಕೊಂಡಿದ್ದೇವೆ. ಆದರೆ, ಸರಕಾರದಿಂದ ಆಗಬೇಕಾದ ವ್ಯವಸ್ಥೆ ಇನ್ನೂ ಆಗಿಲ್ಲ. ಒಬ್ಬ ಅಧ್ಯಕ್ಷನಾಗಿ ನಾನು ಸಮ್ಮೇಳನ ಯಾವಾಗ ಅನ್ನೋದನ್ನು ನಿಶ್ಚಿತವಾಗಿ ಹೇಳಲು ಆಗೋದಿಲ್ಲ ಎಂದರೆ ಅದು ದೌರ್ಭಾಗ್ಯ. ಸಮ್ಮೇಳನ ವಿಚಾರವಾಗಿ ಸಿಎಂ ಅವರಿಗೆ ಮತ್ತು ಜಿಲ್ಲಾಡಳಿತಕ್ಕೆ ಈವರೆಗೆ ಸಾಕಷ್ಟು ಕಾಗದಗಳನ್ನು ಬರೆದಿರುವೆ. ಕಾಗದಗಳನ್ನು ಬರೆದರೆ ಯಾರೋ ಒಬ್ಬ ಅಂಡರ್ ಸೆಕ್ರೆಟರಿ ಉತ್ತರ ಕೊಡ್ತಾನೆ.

ಈ ರೀತಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗಾದರೆ ಬಹಳ ಬೇಸರ ಆಗುತ್ತಿದೆ. ದಸರಾದಲ್ಲೂ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನು ಪಕ್ಕಕ್ಕೆ ತಳ್ಳಿದರು. ನಾನು ಮಹೇಶ ಜೋಶಿಯಾಗಿ ಏನನ್ನೂ ಕೇಳ್ತಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಕೇಳ್ತಿದ್ದೇನೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಸಮ್ಮೇಳನದ ಬಗ್ಗೆ ನನಗೆ ನಿಶ್ಚಿತತೆ ಇಲ್ಲದಾಗಿದೆ. ಸಮ್ಮೇಳನಕ್ಕೆ ಬಜೆಟ್​ನಲ್ಲಿ ಇಪ್ಪತ್ತು ಕೋಟಿ ಕೊಟ್ಟಿದ್ದೇವೆ ಅಂದರು. ಇವತ್ತಿನವರೆಗೂ ಜಿಲ್ಲಾಡಳಿತಕ್ಕೆ ಒಂದು ಪೈಸೆಯೂ ಬಂದಿಲ್ಲ.

ಸಿ‌ಎಂ ನಿಗದಿತ ದಿನಾಂಕಕ್ಕೆ ಸಮ್ಮೇಳನ ಮಾಡ್ತೀವಿ ಅಂತಾರೆ. ಜಿಲ್ಲಾ ಉಸ್ತುವಾರಿ ಸಚಿವರು ಸಮ್ಮೇಳನದ ದಿನಾಂಕ‌‌ ಮುಂದೂಡ್ತೀವಿ ಅಂತಾರೆ. ಸಮ್ಮೇಳನಕ್ಕೆ ಗುರ್ತಿಸಿದ‌ ಸ್ಥಳ ಕೋರ್ಟಿನಲ್ಲಿದೆ ಅಂತಾರೆ. ನಾನು ಸಿಎಂ ಅವರಿಗೆ ಹೇಳಿದೆ. ಯಾರಾದ್ರೂ ಒಬ್ಬ ಅಧಿಕಾರಿ ಅಥವಾ ಮಂತ್ರಿ ನೇಮಕ ಮಾಡುವಂತೆ ಹೇಳಿದೆ. ಯಾವ ಕೆಲಸವೂ ಆಗಿಲ್ಲ. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಕಸಾಪ ಕಡೇಗಣಿಸಲಾಗಿದೆ ಎಂದು ಜೋಷಿ ಆರೋಪಿಸಿದರು.

ಇದನ್ನೂ ಓದಿ:ಮಂಗಳೂರು ದಸರಾ ವೈಭವ: ಹುಲಿ ವೇಷ ಕುಣಿತವೇ ವಿಶೇಷ ಆಕರ್ಷಣೆ

ABOUT THE AUTHOR

...view details