ಕರ್ನಾಟಕ

karnataka

ETV Bharat / state

ಹಾವೇರಿ: ಸಾಹಿತಿ, ರಂಗಕರ್ಮಿ ಸತೀಶ್​ ಕುಲಕರ್ಣಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ - 68ನೇ ಕನ್ನಡ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವ ಸಂಬಂಧ ಹಾವೇರಿಯ ಸಾಹಿತಿ ಸತೀಶ್​ ಕುಲಕರ್ಣಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

karnataka-rajyothsava-award-to-poet-sathish-kulakarni
ಹಾವೇರಿ : ಸಾಹಿತಿ ಸತೀಶ್​ ಕುಲಕರ್ಣಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

By ETV Bharat Karnataka Team

Published : Nov 1, 2023, 8:26 AM IST

Updated : Nov 1, 2023, 9:27 AM IST

ಹಾವೇರಿ : ಸಾಹಿತಿ, ರಂಗಕರ್ಮಿ ಸತೀಶ್​ ಕುಲಕರ್ಣಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ಹಾವೇರಿ: 68ನೇ ಕನ್ನಡ ರಾಜ್ಯೋತ್ಸವ ಸಂಬಂಧ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 68 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ಸಾಧಕರ ಹೆಸರನ್ನು ಘೋಷಿಸಿದರು. ಈ ಬಾರಿ ಜಿಲ್ಲೆಯ ಸಾಹಿತಿ, ರಂಗಕರ್ಮಿ ಸತೀಶ್ ಕುಲಕರ್ಣಿ ಅವರಿಗೆ ಸಾಹಿತ್ಯ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಬಂಡಾಯ ಮತ್ತು ದಲಿತ ಸಾಹಿತ್ಯದ ಮೂಲಕ ಗುರುತಿಸಿಕೊಂಡಿರುವ ಸತೀಶ್ ಕುಲಕರ್ಣಿ ಅವರು ಕಳೆದ 50 ವರ್ಷಗಳಿಂದ ಸಾಹಿತ್ಯ ಲೋಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಕಾವ್ಯ ವಿಭಾಗದಲ್ಲಿ ಕುಲಕರ್ಣಿ ಅವರಿಗೆ ಪ್ರಶಸ್ತಿ ಲಭಿಸಿದೆ. ಸುಮಾರು 8 ವಿವಿಗಳಲ್ಲಿ ಇವರ ಕವಿತೆಗಳು ಪಠ್ಯಗಳಾಗಿವೆ. ಪುಟ್ಟರಾಜ್ ಎಂಬ ವಿದ್ಯಾರ್ಥಿ ಸತೀಶ್ ಕುಲಕರ್ಣಿ ಸಾಹಿತ್ಯದ ಮೇಲೆ ಪಿಹೆಚ್‌ಡಿ ಮಾಡಿದ್ದಾರೆ. ಕಾವ್ಯ, ನಾಟಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾಹಿತಿ ಸತೀಶ್​ ಕುಲಕರ್ಣಿ ಅವರು, ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ. ಕರ್ನಾಟಕ ಎಂದು ನಾಮಕರಣಗೊಂಡ ಸುವರ್ಣ ಸಂಭ್ರಮ ಸಂದರ್ಭದಲ್ಲಿ ನನಗೆ ಪ್ರಶಸ್ತಿ ದೊರೆತಿರುವುದು ಖುಷಿಯಾಗಿದೆ. ಇದೊಂದು ಮರೆಯಲಾರದ ಕ್ಷಣ. ಅದರಲ್ಲೂ ಸಾಹಿತ್ಯ ಕ್ಷೇತ್ರಕ್ಕೆ ಪ್ರಶಸ್ತಿ ದೊರೆತಿರುವುದು ಸಂತಸವನ್ನು ಇಮ್ಮಡಿಗೊಳಿಸಿದೆ ಎಂದು ಹೇಳಿದರು.

ನಮ್ಮನ್ನು ದಿಗ್ಗಜರ ಜೊತೆ ಗುರುತಿಸಿರುವುದು ಹೆಮ್ಮೆಯ ವಿಷಯ. ಬರವಣಿಗೆ ಮತ್ತು ಚಳುವಳಿಯನ್ನು ನಾನು ಸಮಾನವಾಗಿ ಮಾಡಿಕೊಂಡು ಬಂದಿದ್ದೇನೆ. ಈ ಪಯಣದ ಬಗ್ಗೆ ನನಗೆ ಹೆಮ್ಮೆ ಇದೆ. ಸಿನಿಮಾ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದು, ಸುಮಾರು ನಾಲ್ಕು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ಸಾವಿತ್ರಿ ಬಾಯಿ ಫುಲೇ ಅವರ ವಿಚಾರಗಳಿಂದ ಆಕರ್ಷಿತನಾಗಿ ಬೆಳೆದವನು. ಇವೆಲ್ಲಾ ನನ್ನ ಜೀವನದ ಮಹತ್ತರ ಅಂಶಗಳು. ಸಮಾಧಾನ, ಶಾಂತಿ ಮತ್ತು ನೆಮ್ಮದಿಯನ್ನು ಬರವಣಿಗೆಯಲ್ಲಿ ಕಂಡುಕೊಂಡಿದ್ದೇನೆ. ಇದಕ್ಕೆ ಕಳಸಪ್ರಾಯವಾಗಿ ಇಂದು ರಾಜ್ಯದ ಉನ್ನತ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ ಎಂದರು.

ಸಾಹಿತ್ಯ ಕ್ಷೇತ್ರದಲ್ಲಿ ಹೊಸಬರಿಗೆ ಸಾಕಷ್ಟು ಪ್ರೋತ್ಸಾಹ ನೀಡಿದ್ದೇನೆ. ನಮ್ಮ ಪರಿಸರದಲ್ಲಿನ ಅನೇಕ ಕವಿಗಳಿಗೆ ಪ್ರೇರಣೆ ನೀಡಿದ್ದೇನೆ. ಸಮುದಾಯ ಚಳುವಳಿಯಾಗಿ ಬಂದಿರುವುದರಿಂದ ರಂಗಭೂಮಿಯನ್ನು ಮನರಂಜನೆಯನ್ನಾಗಿ ಪರಿಗಣಿಸದೇ ಅದನ್ನು ಚಳುವಳಿಯನ್ನು ಮಾಡಿರುವುದು ಹೆಚ್ಚು ಖುಷಿ ನೀಡಿದೆ. ಅನೇಕ ಕಲಾತಂಡಗಳನ್ನ ಬೆಳೆಸಿದ್ದೇನೆ. ಹಾವೇರಿ ನೆಲ ನನಗೆ ಸಾಕಷ್ಟು ಶಕ್ತಿ ನೀಡಿದೆ. ನನ್ನ ಕರ್ಮಭೂಮಿ ಹಾವೇರಿ ಎಂದು ಸತೀಶ್ ಕುಲಕರ್ಣಿ ತಿಳಿಸಿದರು.

ಇದನ್ನೂ ಓದಿ :ಚಾಮರಾಜನಗರ: ಇಬ್ಬರು ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ: ಒಬ್ಬರು ಸಾಹಿತಿ, ಇನ್ನೊಬ್ಬರು ವಿಜ್ಞಾನಿ

Last Updated : Nov 1, 2023, 9:27 AM IST

ABOUT THE AUTHOR

...view details