ಹಾವೇರಿ/ರಾಯಚೂರು/ದಕ್ಷಿಣ ಕನ್ನಡ: ರಾಜ್ಯದ ಹಲವೆಡೆ ವರುಣಾರ್ಭಟ ಇನ್ನೂ ಎರಡು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೆಲವು ಜಿಲ್ಲೆಗಳಲ್ಲಿ ಇಂದು ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಹಾವೇರಿ ಮಳೆ ವರದಿ: ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಇಂದು ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ಪದವಿ ಮತ್ತು ಐಟಿಐ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಸರ್ಕಾರಿ ರಜೆಗಳಲ್ಲಿ ಈ ರಜೆಯನ್ನು ಸರಿದೂಗಿಸುವ ಆಣತಿ ಮೇರೆಗೆ ರಜೆ ನೀಡಲಾಗಿದೆ.
ಮನೆ ಗೋಡೆ ಕುಸಿತ:ಮಳೆ ಆರ್ಭಟಕ್ಕೆ ಮನೆಯ ಗೋಡೆ ಕುಸಿದು ಮನೆಯಲ್ಲಿರುವ ಸದಸ್ಯರು ಪ್ರಾಣಾಪಾಯದಿಂದ ಪಾರಾದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹೂವಿನಶಿಗ್ಲಿ ಗ್ರಾಮದಲ್ಲಿ ನಡೆಯಿತು. ಗ್ರಾಮದ ಗಂಗವ್ವ ಮತ್ತು ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿರಂತರ ಮಳೆಗೆ ನೆನೆದ ಗೋಡೆ ಒಮ್ಮೆಲೆ ಕುಸಿದಿದೆ. ಮನೆಯಲ್ಲಿನ ವಸ್ತುಗಳನ್ನು ಹೊರಗೆ ತರಲು ಕುಟುಂಬ ಸದಸ್ಯರು ಹರಸಾಹಸಪಟ್ಟರು. ಗೋಡೆ ಕುಸಿತದಿಂದ ಬೀದಿಗೆ ಬಂದಿರುವ ಕುಟುಂಬ, ದನ-ಕರು ಕಟ್ಟಿಕೊಂಡು ಎಲ್ಲಿ ಹೋಗಬೇಕು ಎಂಬ ಆತಂಕದಲ್ಲಿದ್ದಾರೆ. ಕುಟುಂಬಕ್ಕೆ ಗ್ರಾಮಸ್ಥರು ಧೈರ್ಯ ತುಂಬಿದರು.
ರಾಯಚೂರು ಮಳೆ ವರದಿ: ರಾಯಚೂರು ಜಿಲ್ಲೆಯಲ್ಲೂ ಕಳೆದ ವಾರದಿಂದ ಮಳೆ ನಿರಂತರವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಇಂದು ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುವ ಮುನ್ಸೂಚನೆ ಇದೆ. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಹಾಗೂ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಣೆ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಶಾಲಾ-ಕಾಲೇಜುಗಳಿಗೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಣೆ ಮಾಡುವಂತೆ ಕೋರಿದ್ದರು. ಇದರ ಆಧಾರದ ಮೇಲೆ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ರಜೆ ಘೋಷಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಮಳೆ ವರದಿ:ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂದು ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಎಂ.ಪಿ. ಅವರು ಆದೇಶ ಮಾಡಿದ್ದಾರೆ. ಪಿಯು ಮತ್ತು ಪದವಿ ತರಗತಿಗಳಿಗೆ ರಜೆ ಘೋಷಿಸಿಲ್ಲ. ಜಿಲ್ಲೆಯ ಮಳೆ ಪ್ರಮಾಣದಲ್ಲಿ ಸದ್ಯ ಕೊಂಚ ಇಳಿಕೆಯಾಗಿದ್ದು, ನದಿಗಳ ನೀರಿನ ಮಟ್ಟ ಕಡಿಮೆಯಾಗಿದೆ. ಆದ್ರೆ ಜಿಲ್ಲೆಯಲ್ಲಿ ಭಾರಿ ಚಳಿ ಆವರಿಸಿದೆ.