ಚಿಂತಕ ಪುರುಷೋತ್ತಮ ಬಿಳಿಮಲೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಡಾ.ಮಹೇಶ್ ಜೋಷಿ ಹಾವೇರಿ :ಚಿಂತಕ ಪುರುಷೋತ್ತಮ ಬಿಳಿಮಲೆ ಅವರು 86ನೇ ಸಾಹಿತ್ಯ ಸಮ್ಮೇಳನದ ಶಾಮಿಯಾನ ಹಾಕುವ ಕೆಲಸವನ್ನು ತಾವು ಸೂಚಿಸುವ ವ್ಯಕ್ತಿಗೆ ನೀಡಬೇಕು ಎಂದು ತಿಳಿಸಿದ್ದರು. ಆದರೆ ನಾವು ಆ ರೀತಿ ಮಾಡದಿರುವುದಕ್ಕೆ ಇದೀಗ ಜನಸಾಹಿತ್ಯ ಮಾಡಲು ಮುಂದಾಗಿದ್ದಾರೆ ಎಂದು ಕಸಾಪ (ಕನ್ನಡ ಸಾಹಿತ್ಯ ಪರಿಷತ್) ಅಧ್ಯಕ್ಷ ಮಹೇಶ್ ಜೋಷಿ ಹೇಳಿದ್ದಾರೆ.
ಮುಸ್ಲಿಂ ಪ್ರತಿರೋಧವಾದಿ ಜನಸಾಹಿತ್ಯ ಸಮ್ಮೇಳನ ನಡೆಸಲು ಮುಂದಾಗಿರುವ ಪುರುಷೋತ್ತಮ ಬಿಳಿಮಲೆಯವರು ಹೇಳಿದ ಕೆಲಸ ಮಾಡದಿರುವುದೇ ಅವರು ಈ ರೀತಿ ಆರೋಪ ಮಾಡಲು ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಸ್ಲಿಮರಿಗೆ ಅವಕಾಶ ಸಿಕ್ಕಿಲ್ಲ ಎನ್ನುವುದಕ್ಕೆ ಇದು ಕನ್ನಡ ಸಾಹಿತ್ಯ ಸಮ್ಮೇಳನವೇ ಹೊರತು ಯಾವುದೇ ಜಾತಿ, ಧರ್ಮದ ಸಮ್ಮೇಳನವಲ್ಲ. ಇಲ್ಲಿ ಮಾನದಂಡ ಕನ್ನಡ ಮಾತ್ರ ಎಂದರು.
ನಾನು ಯಾವುದೇ ಆರೋಪಗಳಿಗೆ ಹೆದರುವವನಲ್ಲ. ಆರೋಪಗಳಿಗೆ ಪ್ರತಿನಿಂದನೆ ವ್ಯಕ್ತಪಡಿಸುವುದು ಪರಿಷತ್ತಿನ ಘನತೆ ಗೌರವವೂ ಅಲ್ಲ. ಆದರೆ, ಸುಳ್ಳು ಪ್ರಚಾರಕ್ಕಾಗಿ ಮುಂದಾದಾಗ ಉತ್ತರಿಸಬೇಕಾಗಿದ್ದು ದಾಖಲೆ ಸಮೇತ ಮಾಧ್ಯಮದ ಮುಂದೆ ಬಂದಿದ್ದೇನೆ ಎಂದು ಜೋಷಿ ಹೇಳಿದರು.
ಪುರುಷೋತ್ತಮ ಬಿಳಿಮಲೆ, ಹನೀಫ್ ಮತ್ತು ಆರ್.ಜೆ.ಹಳ್ಳಿ ನಾಗರಾಜ್ ನನ್ನ ಜೊತೆ ಅನ್ಯೋನ್ಯವಾಗಿದ್ದವರು. ಹನೀಫ್ ಮಾಧ್ಯಮದಲ್ಲಿದ್ದವರು. ಅವರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಅದೇ ರೀತಿ ಅವರು ನಡೆದುಕೊಳ್ಳಬೇಕು. ಸಾಮಾಜಿಕ ಜವಾಬ್ದಾರಿ ಮರೆತು ಮಾಡಿರುವ ಕೆಲಸಕ್ಕೆ ನಾನು ಖಂಡನೆ ವ್ಯಕ್ತಪಡಿಸುತ್ತೇನೆ.
ಮುಸ್ಲಿಮರಲ್ಲಿ ಯಾರೂ ಸಾಧಕರಿಲ್ಲವೇ ಎಂದು ಹನೀಫ್ ಪ್ರಶ್ನಿಸಿದ್ದು, ಮಾಧ್ಯಮ ಪ್ರತಿನಿಧಿ ರಾಜು ನದಾಫ್ ಯಾವ ಧರ್ಮದವರು ಎಂದು ಅವರೇ ಉತ್ತರಿಸಬೇಕು. ಏನಾದರೂ ಆಗು ಮೊದಲು ಮಾನವನಾಗು ಎನ್ನುವ ಅಸ್ಮಿತೆ ಕಸಾಪದ್ದು ಮತ್ತು ಸಮ್ಮೇಳನದ್ದು. ಆದರೆ ಈ ಮೂವರು ಏನಾದರೂ ಆಗು ಮೊದಲು ಮುಸ್ಲಿಮನಾಗು ಎನ್ನುತ್ತಿದ್ದಾರೆ. ಪ್ರಗತಿಪರ ಚಿಂತಕರು ಪೂರ್ವಾಗ್ರಹ ಪೀಡಿತರಾಗಿದ್ದಾರೆ ಎಂದು ಮಹೇಶ ಜೋಷಿ ಬೇಸರ ವ್ಯಕ್ತಪಡಿಸಿದರು.
ಧರ್ಮ ಸಾಮರಸ್ಯ ಸಾರಿದ ಹಾವೇರಿಯ ನೆಲದಲ್ಲಿ ಧರ್ಮ ಜಾತಿ ಹುಡುಕುತ್ತಿರುವುದು ಮನೋರೋಗದ ನರಳುತ್ತಿರುವ ಸೂಚಕ. ಇದರಿಂದ ನಾವು ಹೊರಬರಬೇಕಿದೆ. ಕಲೆಯನ್ನು ಜಾತಿಯ ದುರ್ಬೀನಿನಿಂದ ನೋಡುತ್ತಿರುವುದು ಅಕ್ಷಮ್ಯ ಅಪರಾದ. ಕನ್ನಡಿಗರಿಗೆ ಮಾಡಿದ ಅವಮಾನ. ಮೊಸರಿನಲ್ಲಿ ಕಲ್ಲು ಹುಡುಕುವುದನ್ನು ಮೊದಲು ಬಿಡಬೇಕು ಎಂದು ಅಸಮಾಧಾನ ಹೊರಹಾಕಿದರು.
ಕನ್ನಡ ಸಾಹಿತ್ಯ ಪರಿಷತ್ ಎಲ್ಲಿಯೂ ದ್ವೇಷ ಮಾಡುವುದಿಲ್ಲ. ಕಸಾಪ ರಾಜ್ಯಾಧ್ಯಕ್ಷನಾಗಿ ಅವರಿಗೆ ಅಹ್ವಾನ ನೀಡದಿರುವುದಕ್ಕೆ ನಾನು ಕೋಮುವಾದಿಯಾಗಿ ಬಿಡುತ್ತೇನೆಯೇ? ಎಂದು ಜೋಷಿ ಕೇಳಿದರು. ಬಿಳಿಮಲೆಗೆ ಸ್ವಂತ ಲಾಭ, ಸ್ವಹಿತ ಮುಖ್ಯವಾಗಿದ್ದು, ಸಮ್ಮೇಳನಕ್ಕೆ ಮೊದಲು ಬರುವುದಾಗಿ ತಿಳಿಸಿದ್ದರು. ಆದರೆ, ಬಿಳಿಮಲೆ ಹೇಳಿದವರಿಗೆ ಶಾಮಿಯಾನ ಹಾಕಲು ಅವಕಾಶ ನೀಡದ್ದಕ್ಕೆ ಆರೋಗ್ಯ ಸರಿಯಿಲ್ಲ ಎಂದು ಪತ್ರ ಬರೆದಿದ್ದಾರೆ. ಇವರಿಗೆ ಜನಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆರೋಗ್ಯ ಸರಿ ಇದೆಯೇ ಎಂದು ಜೋಷಿ ಪ್ರಶ್ನಿಸಿದ್ದಾರೆ.
ಸಮ್ಮೇಳನದಲ್ಲಿ ಸುಮಾರು 11 ಜನ ಮುಸ್ಲಿಮರಿಗೆ ಅವಕಾಶ ಕಲ್ಪಿಸಲಾಗಿದೆ. ಹನೀಫ್ ಹಳದಿಕಣ್ಣಿನಿಂದ ನೋಡುವುದನ್ನ ಬಿಡಬೇಕು. ಸಾಹಿತ್ಯ ಒಡೆದ ಮನಸ್ಸುಗಳನ್ನು ಕೂಡಿಸುವುದು, ಆದರೆ ಕೂಡಿದ ಮನಸ್ಸುಗಳನ್ನು ಒಡೆಯಬೇಡಿ. ಜಾತಿ ಧರ್ಮದ ಹೆಸರಿನಲ್ಲಿ ಕನ್ನಡದ ಅಸ್ಮಿತೆಯನ್ನು ಹಾಳು ಮಾಡುತ್ತಿರುವ, ಧ್ವಂಸ ಮಾಡುತ್ತಿರುವವರನ್ನು ದೂರವಿಡಿ ಎಂದು ಮಹೇಶ್ ಜೋಷಿ ಮನವಿ ಮಾಡಿದರು.
ಇದನ್ನೂ ಓದಿ:ಬೀದರ್ ಜಿಲ್ಲಾಧಿಕಾರಿಯ ಅಸಡ್ಡೆಯ ನುಡಿಗಳಿಂದ ಕನ್ನಡದ ಸಮ್ಮೇಳನಕ್ಕೆ ಅವಮಾನ: ಡಾ. ಮಹೇಶ ಜೋಶಿ