ಕನ್ನಡಮಯಗೊಂಡ ಹಾವೇರಿ ಸಾರಿಗೆ ಬಸ್ ಹಾವೇರಿ:ಹಾವೇರಿ ಸಾರಿಗೆ ಇಲಾಖೆ ಕನ್ನಡಕ್ಕಾಗಿ ವಿಶೇಷ ರಥ ಸಿದ್ಧಪಡಿಸಿದೆ. ಜಿಲ್ಲೆಯ ಹಾನಗಲ್ ವಿಭಾಗದ ಚಾಲಕರು ನಿರ್ವಾಹಕರು ಮತ್ತು ಸಿಬ್ಬಂದಿ ವರ್ಗ ಈ ಸಾರಿಗೆ ಬಸ್‌ನ್ನು ಕನ್ನಡಮಯ ಮಾಡಿದ್ದಾರೆ. ಬಸ್‌ಗೆ ಕನ್ನಡ ರಥ ಎಂದು ನಾಮಕರಣ ಮಾಡಿದ್ದು, ಬಸ್ ಒಳಗೆ ಮತ್ತು ಹೊರಗೆ ಕನ್ನಡ ರಾರಾಜಿಸುತ್ತಿದೆ.
ಕನ್ನಡದ ಬಸ್ ಎಂದೇ ಪ್ರಸಿದ್ಧಿ.. ಬಸ್ ಹೊರಗೆ ಮತ್ತು ಒಳಗೆ ಕನ್ನಡದ ಕವಿಗಳ ಲೇಖಕರ ಸಾಹಿತಿಗಳ ಭಾವಚಿತ್ರ ಹಾಕಲಾಗಿದೆ. ಬಸ್ ಒಳಗೆ ಖ್ಯಾತ ಕವಿಗಳ ಸಾಲುಗಳನ್ನು ಹಾಕಲಾಗಿದ್ದು, ಪ್ರಯಾಣಿಗರಿಗೆ ಈ ಬಸ್ ಕನ್ನಡದ ಬಸ್ ಎಂದೇ ಪ್ರಸಿದ್ಧಿಯಾಗಿದೆ. ಹಾನಗಲ್ ಬಸ್ ನಿಲ್ದಾಣದಿಂದ ಹಾವೇರಿ ಬಸ್ ನಿಲ್ದಾಣ ನಡುವೆ ಈ ಬಸ್ ಸಂಚರಿಸುತ್ತದೆ. ವಾಯವ್ಯ ವಾಹಿನಿ ಕನ್ನಡಮ್ಮನ ರಥ ಹೆಸರಿನ ಈ ಬಸ್ ಪೂರ್ಣವಾಗಿ ಅರಿಷಿಣ ಮತ್ತು ಕುಂಕುಮ ಬಣ್ಣದಿಂದ ಅಲಂಕೃತಗೊಂಡಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳು ಹಿರಿಯ ಕವಿಗಳ ಚಿತ್ರಗಳು ಕನ್ನಡಾಭಿಮಾನಿಗಳನ್ನು ಕೈಬೀಸಿ ಕರೆಯುತ್ತಿವೆ.
ಬಸ್ ಹೊರಗೆ ಎರಡು ಬದಿ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂದು ಬರೆಯಲಾಗಿದೆ. ಬಸ್ ಮುಂಬಾಗ ಭುವನೇಶ್ವರಿ ಚಿತ್ರ ಹಾಕಲಾಗಿದ್ದು, ಅದರ ಅಕ್ಕಪಕ್ಕದಲ್ಲಿ ಹೊಯ್ಸಳರ ಲಾಂಛನವನ್ನು ಚಿತ್ರಿಸಲಾಗಿದೆ. ಹಾವೇರಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು ಪ್ರಮುಖ ಮಠಗಳ ಮತ್ತು ಮಠಾಧೀಶರ ಚಿತ್ರಗಳನ್ನ ಬಸ್‌ನಲ್ಲಿ ಬಳಸಲಾಗಿದೆ. ಮೊದ ಮೊದಲು ಬಸ್‌ನ್ನು ಹಾವೇರಿಯಲ್ಲಿ ನಡೆದ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಈ ರೀತಿ ಅಲಂಕರಿಸಲಾಗಿತ್ತು. ಆದರೆ ಬಸ್‌ಗೆ ಪ್ರಯಾಣಿಕರು ಸ್ಪಂದಿಸಿದ್ದು ನೋಡಿ ಕನ್ನಡ ರಥವನ್ನು ಅದೇ ರೀತಿ ಮುಂದುವರೆಸಲಾಗಿದೆ.
ಸಾಹಿತ್ಯ ಸಮ್ಮೇಳನದ ಕಾರ್ಯಗಳಿಗೂ ಬಳಕೆ.. ಸಾಹಿತ್ಯ ಸಮ್ಮೇಳನದ ನಂತರ ಜಿಲ್ಲೆಯ ಸಾಹಿತ್ಯ ಕಾರ್ಯಗಳಿಗೆ ಈ ಬಸ್ ಬಳಸಲಾಗುತ್ತದೆ. ಅಕ್ಕಿ ಆಲೂರಿನಲ್ಲಿ ನಡೆದ ನುಡಿ ಸಂಭ್ರಮ ತಾಲೂಕುಗಳಲ್ಲಿ ನಡೆಯುವ ಸಮ್ಮೇಳನ ಮತ್ತು ಜಿಲ್ಲಾಮಟ್ಟದ ಸಮ್ಮೇಳನಗಳಿಗೆ ಈ ಬಸ್ ಬಳಸಲಾಗುತ್ತದೆ. ಹಾನಗಲ್ನಿಂದ ಅಕ್ಕಿ ಆಲೂರು, ಆಡೂರು, ಸಂಗೂರು, ಆಲದಕಟ್ಟಿ ಗ್ರಾಮಗಳಲ್ಲಿ ಈ ಬಸ್ ನಿಲುಗಡೆಯಾಗುತ್ತದೆ. ಅದೇ ರೀತಿ ಹಾವೇರಿಯಿಂದ ಹಾನಗಲ್‌ಗೆ ಸಂಚರಿಸುವಾಗ ಆಲದಕಟ್ಟಿ, ಸಂಗೂರು, ಆಡೂರು ಮತ್ತು ಅಕ್ಕಿ ಆಲೂರು ಗ್ರಾಮಗಳಲ್ಲಿ ಬಸ್ ನಿಲುಗಡೆಯಾಗುತ್ತೆ.
ವಾಯವ್ಯ ಸಾರಿಗೆ ಇಲಾಖೆಯಲ್ಲಿ ಕನ್ನಡ ಕ್ರಿಯಾ ಸಮಿತಿ ಸಂಘ ರಚಿಸಲಾಗಿದ್ದು, ಸಂಘ ಕನ್ನಡ ಕಾರ್ಯಗಳಿಗೆ ನೆರವಾಗುತ್ತಿದೆ. ಜನವರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕಾಗಿ ಈ ಬಸ್ ಸಿದ್ಧಪಡಿಸಲಾಗಿತ್ತು. ಆದರೆ ಜನರು ಇದರ ಬಗ್ಗೆ ಹೆಚ್ಚು ಒಲುವು ತೋರಿಸಿದ್ದರಿಂದ ಬಸ್‌ನ್ನು ಅದೇ ರೀತಿ ಮುಂದುವರಿಸಲಾಗಿದೆ. ಅಕ್ಕಿ ಆಲೂರಿನಲ್ಲಿ 31 ನೇ ನುಡಿ ಸಂಭ್ರಮ ನಡೆದಿದ್ದರಿಂದ ಮತ್ತೆ ಅದರಲ್ಲಿ ಕೆಲ ಬದಲಾವಣೆ ಮಾಡಿ ಮತ್ತೆ ಬಸ್‌ನ್ನು ಓಡಿಸಲಾಗುತ್ತಿದೆ.
ಮತ್ತಷ್ಟು ಕನ್ನಡಮಯ ಮಾಡಲು ಸಾರಿಗೆ ಸಂಸ್ಥೆ ಉತ್ಸುಕ.. ಕನ್ನಡ ರಾಜ್ಯೋತ್ಸವಕ್ಕೆ ಬಸ್ಸು ಇನ್ನಷ್ಟು ಕನ್ನಡಮಯ ಮಾಡುವ ಇಂಗಿತವನ್ನು ಬಸ್ ಸಿಬ್ಬಂದಿ ವ್ಯಕ್ತಪಡಿಸುತ್ತಾರೆ. ಬಸ್ನ ಒಳಗೆ ಬರುತ್ತಿದ್ದಂತೆ ಪ್ರಯಾಣಿಕರಿಗೆ ಕನ್ನಡ ಹಾಡುಗಳು ಪಸರಿಸುವ ವ್ಯವಸ್ಥೆ ಮಾಡಬೇಕು. ಬಸ್‌ನಲ್ಲಿ ಪ್ರಯಾಣದ ಅವಧಿಯಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಇದರ ಜೊತೆಗೆ ಬಸ್ನ ಪ್ರತಿ ಆಸನದಲ್ಲಿ ಒಂದೊಂದು ಪುಸ್ತಕ ಓದಲು ವ್ಯವಸ್ಥೆ ಮಾಡಬೇಕು. ಹಾಗೆ ಈ ಬಸ್‌ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಕನ್ನಡ ತತ್ವ ಸಾರುವ ನುಡಿಗಳು ಗಾದೆಮಾತುಗಳು ಸಾಹಿತಿಗಳ ಪ್ರಮುಕಾಂಶ ವಚನಗಳನ್ನು ಮುದ್ರಿಸಿದ ಟಿಕೆಟ್ ನೀಡುವ ಯೋಜನೆಯನ್ನು ಸಾರಿಗೆ ಸಂಸ್ಥೆ ಹೊಂದಿದೆ ಎನ್ನುತ್ತಾರೆ ಸಾರಿಗೆ ಸಿಬ್ಬಂದಿ.
ಕರ್ನಾಟಕರತ್ನ ಪುರಸ್ಕೃತರ ಚಿತ್ರಗಳು, ಕನ್ನಡ ರಾಷ್ಟ್ರಕವಿಗಳು, ಕನ್ನಡ ಪ್ರಥಮಗಳು ಸೇರಿದಂತೆ ಇನ್ನು ಹತ್ತುಹಲವು ಯೋಜನೆಗಳನ್ನು ಸಿಬ್ಬಂದಿ ನಿರ್ಮಿಸಿದ್ದಾರೆ. ಇದಕ್ಕೆಲ್ಲಾ ಹಾನಗಲ್ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಬೆಂಬಲ ಸೂಚಿಸಿದ್ದಾರೆ. ಒಟ್ಟಾರೆಯಾಗಿ ರಥ ಅಂದರೆ ಅದಕ್ಕೆ ಅದರದೆ ವಿಶೇಷ ಅರ್ಥವಿದೆ. ಇದು ಕನ್ನಡದ ರಥ ಕನ್ನಡದ ಕಂಪು ಎಲ್ಲೆಡೆ ಸೂಸುವಂತೆ ಯೋಜನೆ ಜಾರಿಗೆ ತರುತ್ತೇವೆ. ಕೇವಲ ನವೆಂಬರ್ ತಿಂಗಳು ಬರುತ್ತಿದ್ದಂತೆ ಕನ್ನಡದ ಮಂತ್ರ ಜಪಿಸುವುದಲ್ಲ. ಬದಲಿಗೆ ಕನ್ನಡ ಪ್ರತಿದಿನದ ಮಾತಾಗಬೇಕು ಎನ್ನುತ್ತಾರೆ ಕನ್ನಡ ರಥದ ಸಿಬ್ಬಂದಿ. ಜೊತೆಗೆ ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದು ಕನ್ನಡಾಭಿಮಾನ ಮರೆಯುತ್ತಾರೆ.
ಇದನ್ನೂ ಓದಿ:ವೀರರಾಣಿ ಅಬ್ಬಕ್ಕಳ ಕಾಲದಲ್ಲಿ ಹಿಂದೂ ಮುಸ್ಲಿಂ ಭೇದಭಾವ ಇರಲಿಲ್ಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ