ಹಾವೇರಿ:ಇಲ್ಲೊಂದು ಸಾರಿಗೆ ಬಸ್ ಇದೆ. ಈ ಬಸ್‌ನಲ್ಲಿ ಪಯಣಿಸುವ ಪ್ರಯಾಣಿಕ ತನ್ನ ಗಮ್ಯ ಸ್ಥಳವನ್ನೇ ಮರೆಯುತ್ತಾನೆ. ತಾನು ಇಳಿಯುವ ಸ್ಥಳ ಯಾಕೆ? ಇಷ್ಟು ಬೇಗ ಬಂತು ಎಂದು ಬೇಸರ ವ್ಯಕ್ತಪಡಿಸುತ್ತಾನೆ. ಈ ಬಸ್‌ನಲ್ಲಿ ಪಯಣ ಹೀಗೆ ಮುಂದುವರೆದರೆ ಎಷ್ಟು ಚೆನ್ನಾಗಿತ್ತು ಎಂದು ಕೊಳ್ಳುತ್ತಾನೆ. ಇದೇನಪ್ಪಾ?, ಇದ್ಯಾವ ಸಾರಿಗೆ ಬಸ್ ಅಂತೀರಾ ಈ ಸ್ಟೋರಿ ನೋಡಿ.
ಹಿರೇಕೆರೂರು ತಾಲೂಕು ಸಾರಿಗೆ ವಿಭಾಗದ ನಿರ್ವಾಹಕ ಶಶಿಧರ್ ಕಳೆದ ಮೂರು ವರ್ಷಗಳಿಂದ ತನಗೆ ನೀಡಿದ ಸಾರಿಗೆ ಬಸ್‌ನಲ್ಲಿ ಕರ್ನಾಟಕ ದರ್ಶನ ಮಾಡಿಸುತ್ತಿದ್ದಾರೆ.
ಬಸ್ಸಿನಲ್ಲಿ ಕರ್ನಾಟಕ ದರ್ಶನ: ಬಸ್‌ನಲ್ಲಿ ಕರ್ನಾಟಕದ 31 ಜಿಲ್ಲೆಗಳಿವೆ. ಜತೆಗೆ 31 ಜಿಲ್ಲೆಗಳ ಪ್ರವಾಸಿ ತಾಣಗಳ ಚಿತ್ರಗಳು ರಾಜ್ಯದ ಚಿತ್ರಣವನ್ನು ಕಣ್ಮುಂದೆ ತರುತ್ತವೆ. ರಾಜ್ಯದ ಪ್ರಮುಖ ಕವಿಗಳು, ಮಹಾಪುರುಷರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು, ಪ್ರಮುಖ ನದಿಗಳು, ಪ್ರತಿ ಜಿಲ್ಲೆಯಲ್ಲಿನ ತಾಲೂಕುಗಳು ಸೇರಿ ಬಸ್ ಸಂಪೂರ್ಣ ಕನ್ನಡಮಯವಾಗಿದೆ.
ಅಕ್ಷರಶಃ ಕನ್ನಡ ತೇರಾಗಿರುವ ಈ ಬಸ್ ನೋಡುವ ಕಣ್ಣಿಗೆ ಹಬ್ಬ. ಕನ್ನಡಾಂಬೆ ಭುವನೇಶ್ವರಿ ಮೂರ್ತಿ ಇರುವ ಈ ಬಸ್‌ನಲ್ಲಿ ಪ್ರತಿ ಆಸನದಲ್ಲಿ ಕನ್ನಡ ಪುಸ್ತಕ ಇರಿಸಲಾಗಿದೆ. ಇಂದಿನ ದಿನಪತ್ರಿಕೆ, ವಾರ ಪತ್ರಿಕೆ ಸೇರಿದಂತೆ ಕನ್ನಡದ ಮಹಾ ನಟರು, ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳಿವೆ.
ಇದನ್ನೂ ಓದಿ:ನಡೆ ಕನ್ನಡ, ನುಡಿ ಕನ್ನಡ.. ಸಾರಿಗೆ ಸಂಸ್ಥೆ ಬಸ್ನ್ನೇ ಕನ್ನಡಮಯವಾಗಿಸಿದ್ರು ಈ ವಿಶಿಷ್ಟ ಬಸ್ ಚಾಲಕ