ಹಾವೇರಿ: ಕೃಷಿ ಆಧಾರಿತ ಟಗರು ಸಾಕಣೆ ಉದ್ಯಮ ಹಾವೇರಿ ತಾಲೂಕಿನ ಕನಕಾಪುರ ಗ್ರಾಮದ ರೈತ ಮಹಿಳೆ ಮಹಾದೇವಕ್ಕ ಹರಿಹರ ಅವರಿಗೆ ಆರ್ಥಿಕ ಬಲ ತಂದುಕೊಟ್ಟಿದೆ.
ಕನಕಾಪುರ ಗ್ರಾಮದ ಸಾಮಾನ್ಯ ಮಹಿಳೆ ಮಹಾದೇವಕ್ಕ ಹರಿಹರ ಅವರಿಗೆ ಒಂದು ಗಂಡು, ಎರಡು ಹೆಣ್ಣು ಮಕ್ಕಳಿದ್ದಾರೆ. ಪತಿ ನಿಧನರಾಗುತ್ತಿದ್ದಂತೆ ದಿಕ್ಕು ದೋಚದಂತಾಗಿದ್ದ ಮಹಾದೇವಕ್ಕ , ಮನೆ ನಡೆಸಲು ಕಿರಾಣಿ ಅಂಗಡಿ ತೆರೆದರು. ಅದು ಸಹ ಕೊರೊನಾ ಬಂದ ಹಿನ್ನೆಲೆ ಲಾಭಕ್ಕಿಂತ ನಷ್ಟವೇ ಅಧಿಕವಾಯಿತು. ಇಂತಹ ಸಮಯದಲ್ಲಿ ಮಹಾದೇವಕ್ಕಳ ಕೈಹಿಡಿದಿದ್ದು ಟಗರು ಸಾಕಣೆ.
ಕನಕಾಪುರ ಗ್ರಾಮ ಪಂಚಾಯಿತಿಯಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ 68 ಸಾವಿರ ರೂಪಾಯಿ ಕುರಿ ದೊಡ್ಡಿ ನಿರ್ಮಾಣಕ್ಕಾಗಿ ಹಣ ಬಿಡುಗಡೆಯಾಯಿತು. 68 ಸಾವಿರ ರೂಪಾಯಿಯಿಂದ ಕುರಿ ದೊಡ್ಡಿ ಕಟ್ಟಿದ ಮಹಾದೇವಕ್ಕ, ಆರಂಭದಲ್ಲಿ 13 ಕುರಿ ಮರಿಗಳನ್ನು ತಂದು ಸಾಕಣೆ ಆರಂಭಿಸಿದರು.
ಆರಂಭದ ಏಳು - ಬೀಳುಗಳನ್ನು ಸುಧಾರಿಸಿಕೊಂಡ ನಂತರ ತನ್ನ ದೊಡ್ಡಿಯಲ್ಲಿ ಸುಮಾರು 25 ಟಗರುಗಳ ಸಾಕಣೆ ಮಾಡುತ್ತಿದ್ದಾರೆ. ಟಗರು ಮರಿಗಳನ್ನ ಹಾವೇರಿ ಮಾರುಕಟ್ಟೆಯಿಂದ ತಂದು ದೊಡ್ಡಿಯಲ್ಲಿ ಮೇಯಿಸುತ್ತಾರೆ. ಟಗರು ದೊಡ್ಡದಾಗುತ್ತಿದ್ದಂತೆ ದೊಡ್ಡಿಗೆ ಬರುವ ವ್ಯಾಪಾರಸ್ಥರಿಗೆ ಮಾರಾಟ ಮಾಡಿ ಆದಾಯಗಳಿಸುತ್ತಿದ್ದಾರೆ.