ಹಾವೇರಿ : ಜಿಲ್ಲೆಯ ಸವಣೂರು ತಾಲೂಕು ಕಳಸೂರು ಗ್ರಾಮ ಪಂಚಾಯತ್ ವಿರುದ್ಧ ಇದೀಗ ಅಕ್ರಮಗಳ ಆರೋಪ ಕೇಳಿ ಬಂದಿದೆ. ನೆರೆ ಹಾವಳಿಯಲ್ಲಿ ಮನೆ ಕಳೆದುಕೊಂಡ ಫಲಾನುಭವಿಗಳ ಆಯ್ಕೆಯಲ್ಲಿ ಅಕ್ರಮ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮನೆ ಕಳೆದುಕೊಂಡವರಿಗೆ ಬಿಟ್ಟು ಮನೆ ಇದ್ದವರಿಗೆ ಹಣ ಬಿಡುಗಡೆಯಾಗಿದೆ. ಯಾರದ್ದೋ ಮನೆಗೆ ಇನ್ಯಾರದ್ದೂ ಭಾವಚಿತ್ರ ಅಂಟಿಸಿ ಹಣ ಪಡೆಯಲಾಗಿದೆ. ಕಡಿಮೆ ಹಾನಿಯಾದ ಮನೆಗೆ ಅಧಿಕ ಹಣ ಬಿಡುಗಡೆಯಾಗಿದೆ. ಅಧಿಕ ಹಾನಿಯಾದ ಮನೆಗೆ ಕಡಿಮೆ ಹಣ ಬಿಡುಗಡೆಯಾಗಿದೆ.
ಮನೆ ಹಾನಿಯಾಗದವರಿಗೆ ಹಣ ಬಿಡುಗಡೆಯಾಗಿದೆ. ನೈಜ ಫಲಾನುಭವಿಗಳು ಕೇಳಲು ಹೋದರೆ ನೀವು ಅರ್ಜಿ ಸರಿಯಾಗಿ ಹಾಕಿಲ್ಲ. ಇನ್ನೊಮ್ಮೆ ಮಳೆಯಾದಾಗ ಅರ್ಜಿ ಹಾಕಿ ಎಂದು ಪಿಡಿಒ ಮತ್ತು ಗ್ರಾಮ ಪಂಚಾಯತ್ ಸದಸ್ಯರು ಬೇಜಾವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ನೋವನ್ನು ತೋಡಿಕೊಂಡಿದ್ದಾರೆ.
ಕಳಸೂರು ಗ್ರಾಮದಲ್ಲಿ ಕಳೆದ ನೆರೆ ಹಾವಳಿಯಲ್ಲಿ ಹಲವು ಮನೆಗಳು ಧರೆಗುರುಳಿದ್ದವು. ಇಲ್ಲಿಯ ಪಿಡಿಒ ಮತ್ತು ಗ್ರಾಮ ಪಂಚಾಯತ್ ಸದಸ್ಯರು 16 ಮನೆಗಳ ಅರ್ಜಿ ಸ್ವೀಕರಿಸಿ ಫಲಾನುಭವಿಗಳ ಆಯ್ಕೆ ಮಾಡಿದ್ದಾರೆ.
ಮಳೆ ಹಾನಿ ಪರಿಹಾರದ ವಿತರಣೆಯಲ್ಲಿ ಅಕ್ರಮ ಆರೋಪ ಈ ರೀತಿ ಮಾಡುವಾಗ ಹಣ ಪಡೆದು ತಮಗೆ ಬೇಕಾದವರಿಗೆ ಮಾತ್ರ ಪರಿಹಾರ ಸಿಗುವಂತೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ತಮಗೆ ಬೇಕಾದವರಿಗೆ ಐದು ಲಕ್ಷ ಪರಿಹಾರ ನೀಡಿದ್ದರೆ ಇನ್ನು ಕೆಲವರಿಗೆ ಸಾವಿರಾರು ರೂ. ಪರಿಹಾರ ಮಾತ್ರ ದೊರೆಯುವಂತೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪಿಡಿಒ ಮತ್ತು ಕೆಲ ಗ್ರಾಮ ಪಂಚಾಯತ್ ಸದಸ್ಯರು ತಮ್ಮ ಮನಸ್ಸಿಗೆ ಬಂದಂತೆ ಫಲಾನುಭವಿಗಳ ಆಯ್ಕೆ ಮಾಡಿದ್ದಾರೆ. ಆದಷ್ಟು ಬೇಗ ಜಿಲ್ಲಾ ಪಂಚಾಯತ್ ಸಿಇಒ ಈ ಕುರಿತಂತೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹಲವು ಬಡವರು ಮನೆ ಕಳೆದುಕೊಂಡು ಬಾಡಿಗೆ ಮನೆಯಲ್ಲಿದ್ದಾರೆ. ಆದರೆ, ಮನೆ ಕಳೆದುಕೊಂಡವರನ್ನ ಬಿಟ್ಟು ಮನೆ ಇರುವವರಿಗೆ ಮನೆ ಪರಿಹಾರ ಸಿಕ್ಕಿದೆ. ನೆರೆ ಹಾವಳಿ ಅಕಾಲಿಕ ಮಳೆಯಿಂದ ಕಳಸೂರು ಗ್ರಾಮದ ಬಡವರು ಮನೆ ಕಳೆದುಕೊಂಡಿದ್ದಾರೆ.
ಸರ್ಕಾರದಿಂದ ಏನಾದರೂ ಪರಿಹಾರ ಸಿಗಬಹುದೆಂದು ನಿರೀಕ್ಷೆಯಲ್ಲಿದ್ದ ಗ್ರಾಮಸ್ಥರಿಗೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಕಳ್ಳಾಟ ಇನ್ನಿಲ್ಲದ ಬೇಸರ ತರಿಸಿದೆ.