ಹಾವೇರಿ: ಸಿಎಂ ಬಸವರಾಜ ಬೊಮ್ಮಾಯಿಗೆ ಸೋಲಿನ ರುಚಿ ತೋರಿಸಲು ಕಾಂಗ್ರೆಸ್ ಕಸರತ್ತು ನಡೆಸಿದೆ. ಈ ಮಧ್ಯೆ ಬೊಮ್ಮಾಯಿ ನಿರೀಕ್ಷೆ ಮಾಡದ ವ್ಯಕ್ತಿಯೊಬ್ಬರು ಇದೀಗ ಅವರ ವಿರುದ್ಧ ಸ್ಪರ್ಧೆಗೆ ಇಳಿದಿದ್ದಾರೆ. ಇವರ ಹೆಸರು ಕೆ.ಪದ್ಮರಾಜನ್. ತಮಿಳುನಾಡು ಮೂಲದವರು. ದೇಶದಲ್ಲಿಯೇ ಅತಿಹೆಚ್ಚು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇವರೀಗ ಸಿಎಂ ವಿರುದ್ಧ ಸ್ಪರ್ಧಿಸಲು ಶಿಗ್ಗಾಂವಿ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ.
ಈ ಕುರಿತಂತೆ ಗುರುವಾರ ಶಿಗ್ಗಾಂವಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಕೆ.ಪದ್ಮರಾಜನ್‌ಗೆ ಈ ರೀತಿಯ ಘಟಾನುಘಟಿಗಳ ಜೊತೆ ಸ್ಪರ್ಧಿಗಿಳಿಯುವುದು ವಿಶೇಷವೇನಿಲ್ಲ. ಇವರು ಇಲ್ಲಿಯವರೆಗೆ ಸುಮಾರು 233 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ.
ತಮಿಳುನಾಡು ರಾಜ್ಯದ ಸೇಲಂ ಜಿಲ್ಲೆಯ ಮೆಟ್ಟೂರು ಮೂಲದ ಪದ್ಮರಾಜ್ ಮೂಲತ: ಟೈಯರ್ ವ್ಯಾಪಾರಿ. ದೇಶದ ವಿವಿಧ ರಾಜ್ಯಗಳಲ್ಲಿ ನಡೆದಿರುವ ಚುನಾವಣೆಗಳಲ್ಲಿ ಪದ್ಮರಾಜನ್ ಸ್ಪರ್ಧಿಸುವ ಮೂಲಕ ಬಹುತೇಕ ಚುನಾವಣೆಗಳನ್ನು ಎದುರಿಸಿದ್ದಾರೆ. ಕೆ. ಪದ್ಮರಾಜನ್ ಈಗಾಗಲೇ ಸಿಎಂ ಬೊಮ್ಮಾಯಿ ವಿರುದ್ದ ನಾಮಪತ್ರ ಸಲ್ಲಿಸಿದ್ದಾರೆ. ಈ ಮೊದಲು ಅವರು ಮಾಜಿ ಪ್ರಧಾನಿ ದಿವಂಗತ ಅಟಿಲ್ ಬಿಹಾರಿ ವಾಜಪೇಯಿ, ಕಾಂಗ್ರೆಸ್‌ನ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ತಮಿಳುನಾಡಿನ ಸಿಎಂಗಳಾದ ಕರುಣಾನಿಧಿ, ಜಯಲಲಿತಾ ವಿರುದ್ಧವೂ ಸ್ಪರ್ಧಿಸಿದ್ದಾರೆ.
ಎಲ್ಲ ಚುನಾವಣೆಯಲ್ಲಿಯೂ ಸೋಲು : ಬಿ.ಎಸ್.ಯಡಿಯೂರಪ್ಪ, ಬಂಗಾರಪ್ಪ, ಎಸ್.ಎಂ.ಕೃಷ್ಣ ಮತ್ತು ವಿಜಯಮಲ್ಯ ವಿರುದ್ದ ಸಹ ಇವರು ನಾಮಪತ್ರ ಸಲ್ಲಿಸಿದ್ದರು. 1988 ರಲ್ಲಿ ಆರಂಭವಾದ ಇವರ ಚುನಾವಣೆಗೆ ಸ್ಪರ್ಧಿಸುವ ಹಾದಿ ಇದೀಗ 234 ನೇ ಸ್ಪರ್ಧೆವರೆಗೂ ಬಂದು ನಿಂತಿದೆ. ಆರಂಭದಲ್ಲಿ ತಮಿಳುನಾಡಿನಲ್ಲಿ ಮಾತ್ರ ಸ್ಪರ್ಧೆಗೆ ಇಳಿಯುತ್ತಿದ್ದ ಪದ್ಮರಾಜನ್ ಇದೀಗ ದೇಶದ ವಿವಿಧೆಡೆ ಸೇರಿದಂತೆ ಕರ್ನಾಟಕದಲ್ಲಿ ಸಹ ಸಿಎಂ ಬೊಮ್ಮಾಯಿ ವಿರುದ್ಧ ಸ್ಪರ್ಧೆಗೆ ಮುಂದಾಗಿದ್ದಾರೆ. ಇವರು ಯಾವೊಂದು ಚುನಾವಣೆಯಲ್ಲಿಯೂ ಜಯಗಳಿಸಿಲ್ಲ. ಅಷ್ಟೇ ಅಲ್ಲ ಎಲ್ಲ ಚುನಾವಣೆಯಲ್ಲಿಯೂ ಠೇವಣಿ ಕಳೆದುಕೊಂಡಿದ್ದಾರೆ.