ಹಾವೇರಿ ಜಿಲ್ಲಾ ಪಂಚಾಯತ್ ಸಿಇಓ ಮಹ್ಮದ್ ರೋಷನ್ ಹಾವೇರಿ:ಅವರೆಲ್ಲಾ ನರೇಗಾ ಯೋಜನೆಯಲ್ಲಿ ಕೂಲಿ ಕೆಲಸ ಮಾಡುವ ಕಾರ್ಮಿಕರು. ದಿನಬೆಳಕಾದರೆ ಜಂಗಲ್ ಕಟಾವ್, ಸಿಸಿ ರಸ್ತೆ ನಿರ್ಮಾಣ. ಸಿಡಿ ನಿರ್ಮಾಣ ಸೇರಿದಂತೆ ವಿವಿಧ ನರೇಗಾ ಯೋಜನೆಯ ಕೆಲಸಗಳಲ್ಲಿ ನಿರತರಾದವರು. ನರೇಗಾ ಅಧಿಕಾರಿಗಳು ಹೇಳಿದಂತೆ ದೈಹಿಕಶ್ರಮ ನೀಡಿ ನಂತರ ಸರ್ಕಾರ ನಿಗದಿಪಡಿಸಿದ ಕೂಲಿ ಪಡೆದು ತಾವಾಯಿತು, ತಮ್ಮ ಕೆಲಸವಾಯಿತು ಎಂದು ಇದ್ದವರು.
ಆದರೆ, ಸೋಮವಾರ ಹಾವೇರಿ ಜಿಲ್ಲೆಯ ನರೇಗಾ ಕೂಲಿಕಾರ್ಮಿಕರು ಯಾವುದೇ ಕೆಲಸದಲ್ಲಿ ಭಾಗಿಯಾಗಿರಲಿಲ್ಲ. ಇದಕ್ಕೆ ಕಾರಣ ಜಿಲ್ಲಾ ಪಂಚಾಯತ್ ಆಯೋಜಿಸಿದ್ದ ನರೇಗಾ ಹಬ್ಬ. ಹೌದು ಹಾವೇರಿ ಜಿಲ್ಲಾ ಪಂಚಾಯತ್ ಇದೇ ಪ್ರಥಮ ಬಾರಿಗೆ ಸಭಾಂಗಣದಲ್ಲಿ ಕೂಲಿಕಾರ್ಮಿಕರಿಗಾಗಿ ನರೇಗಾ ಹಬ್ಬ ಆಚರಿಸಿತು.
ಸ್ವಯಂಪ್ರೇರಿತ ರಕ್ತದಾನ ಶಿಬಿರ: ಹಾವೇರಿ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನರೇಗಾ ಹಬ್ಬಕ್ಕೆ ಹಾವೇರಿ ಜಿಲ್ಲಾ ಪಂಚಾಯತ್ ಸಿಇಪ ಮಹ್ಮದ್ ರೋಷನ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಅಧಿಕಾರಿಗಳು ಮಹ್ಮದ್ ರೋಷನ್‌ಗೆ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ನರೇಗಾ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ನರೇಗಾ ಹಬ್ಬದ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಜಿಲ್ಲಾ ಪಂಚಾಯತ್ ಸಿಇಓ ಮಹ್ಮದ್ ರೋಷನ್ ತಾವೇ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ರಕ್ತದಾನ ಶಿಬಿರದಲ್ಲಿ 50 ಕ್ಕೂ ಅಧಿಕ ಜನರು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ನರೇಗಾದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮತ್ತು ಕೂಲಿಕಾರ್ಮಿಕರು ರಕ್ತದಾನ ಮಾಡಿದರು. ನರೇಗಾ ಹಬ್ಬದಲ್ಲಿ ಕಿರುತೆರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಗಾಯಕ ಖಾಸೀಂ ಅವರು, ಸೈನಿಕಗೀತೆ, ಕಾಂತಾರ ಚಿತ್ರಗೀತೆಗಳನ್ನ ಹಾಡಿ ಖಾಸೀಂ ರಂಜಿಸಿದರು.
ಈ ಸಂದರ್ಭದಲ್ಲಿ ಮೈಕ್ ಹಿಡಿದ ಹಾವೇರಿ ಜಿಲ್ಲಾ ಪಂಚಾಯತ್ ಸಿಇಒ ತಾವೇನು ಕಡಿಮೆ ಇಲ್ಲ ಎನ್ನುವಂತೆ ಹಾಡು ಹೇಳಿ ಎಲ್ಲರನ್ನ ಅಚ್ಚರಿಗೊಳಿಸಿದರು. ಅಗಲಿದ ನಟ ದಿವಂಗತ ಪುನೀತ್ರಾಜ್ಕುಮಾರ್ ಬೊಂಬೆ ಹೇಳತೈತಿ ಹಾಡು ಹೇಳಿದರು. ಸಿಇಒ ಮಹ್ಮದ್ ರೋಷನ್ ಹಾಡು ಹೇಳುತ್ತಿದ್ದಂತೆ ಅಧಿಕಾರಿಗಳು, ಕೂಲಿಕಾರ್ಮಿಕರು ಕೇಕೆ ಹಾಕಿ ಚಪ್ಪಾಳೆ ಹಾಕಿ ಹುರಿದುಂಬಿಸಿದರು.
ಕೂಲಿಕಾರ್ಮಿಕರ ನಡುವೆ ಹಬ್ಬದ ವಾತಾವರಣ : ಬೊಂಬೆ ಹೇಳತೈತಿ ಹಾಡು ಹೇಳಿದ ಮಹ್ಮದ್ ರೋಷನ್ ಹಿಂದಿ ಹಾಡು ಹೇಳಿದರು. ಗಾಯಕ ಖಾಸೀಂ ಜೊತೆ ಹಾಡು ಹೇಳಿದ ಸಿಇಒ ಮಹ್ಮದ್ ರೋಷನ್ ಕಲಾವಿದರ ಜೊತೆ ಕುಣಿದು ಸಂಭ್ರಮಿಸಿದರು. ಕೂಲಿಕಾರ್ಮಿಕರ ಮಕ್ಕಳ ಜೊತೆ ಹರ್ಷ ವ್ಯಕ್ತಪಡಿಸಿದರು. ನರೇಗಾ ಹಬ್ಬ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಸೇರಿದಂತೆ ಕೂಲಿಕಾರ್ಮಿಕರ ನಡುವೆ ಹಬ್ಬದ ವಾತಾವರಣ ನಿರ್ಮಿಸಿದೆ.
ಪ್ರತಿಯೊಬ್ಬರು ತಮ್ಮ ತಮ್ಮ ಮನೆಯಲ್ಲಿನ ಹಬ್ಬದಲ್ಲಿ ಪಾಲ್ಗೊಂಡ ಸಂಭ್ರಮದಲ್ಲಿ ನರೇಗಾ ಹಬ್ಬದಲ್ಲಿ ಕೂಲಿಕಾರ್ಮಿಕರು ಪಾಲ್ಗೊಂಡಿರುವುದಕ್ಕೆ ಸಿಇಒ ರೋಷನ್ ಸಂಭ್ರಮಿಸಿದರು. ಹಾವೇರಿ ಜಿಲ್ಲಾ ಪಂಚಾಯತ್ ವಿಭಾಗ ರಾಜ್ಯ ಸೇರಿದಂತೆ ರಾಷ್ಟ್ರಮಟ್ಟದಲ್ಲಿ ಹಲವು ಪ್ರಶಸ್ತಿಗಳಿಗೆ ಭಾಜನವಾಗಿದೆ, ಇದಕ್ಕೆಲ್ಲಾ ಕಾರಣ ಕೂಲಿಕಾರ್ಮಿಕರ ಶ್ರಮ ಎಂದು ತಿಳಿಸಿದರು.
ಜನವರಿ ಆರಂಭದಲ್ಲಿ ನಡೆದ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಯಲ್ಲಿ ಈ ಕೂಲಿಕಾರ್ಮಿಕರ ಪಾಲಿದೆ. ಇವರೆಲ್ಲಾ ಕೆಲಸ ಮಾಡಿದ್ದರಿಂದ ಹಲವು ಪ್ರಥಮಗಳಿಗೆ ಹಾವೇರಿ ಜಿಲ್ಲಾ ಪಂಚಾಯತ್ ಕಾರಣವಾಗಿದೆ ಎಂದು ಸಿಇಓ ರೋಷನ್ ತಿಳಿಸಿದರು. ಇದೇ ರೀತಿ ಕೆಲಸ ಮಾಡುವ ಮೂಲಕ ಇನ್ನು ಹೆಚ್ಚಿನ ಕೆಲಸಗಳಾಗಬೇಕು ಎಂದು ರೋಷನ್ ತಿಳಿಸಿದರು. ಕಾರ್ಯಕ್ರಮದಲ್ಲಿ ದಿನನಿತ್ಯದ ಜಂಜಾಟ ಮೆರೆದ ನರೇಗಾ ಕೂಲಿಕಾರ್ಮಿಕರು ಮನೆಯ ಹಬ್ಬದಂತೆ ಆಚರಿಸಿದರು. ವೇದಿಕೆಯ ಮೇಲೆ ತಮ್ಮ ಪ್ರತಿಭೆ ಅನಾವರಣಗೊಳಿಸುವ ಮೂಲಕ ಗಮನ ಸೆಳೆದರು.
ಇದನ್ನೂ ಓದಿ :ಕೊಬ್ಬರಿ ಹೋರಿ 'ಮೈಸೂರು ಹುಲಿ' ಪುಣ್ಯತಿಥಿ: ಇಷ್ಟದ ಆಹಾರ ಸಮರ್ಪಿಸಿ ಪೂಜೆ