ಹಾವೇರಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಮಾತಿನ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಆದರೆ, ಅವರ ಮಾತುಗಳಲ್ಲಿ ಬಿಜೆಪಿ ಕೆಲವನ್ನು ಹೆಕ್ಕಿ ತೆಗೆದು ಅದಕ್ಕೊಂದು ಪ್ಯಾನಲ್ ಡಿಸ್ಕಷನ್ ಇಡಿಸಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ಹಾವೇರಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಹಾಗೂ ಹಿರಿಯ ನಟಿ ಜಯಮಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋನಿಯಾ ಗಾಂಧಿ ಇಡಿ ವಿಚಾರಣೆ ಎದುರಿಸುತ್ತಿದ್ದು ಇದನ್ನು ಖಂಡಿಸಿ ಇಂದು ಹಾವೇರಿಯಲ್ಲಿ ಪ್ರತಿಭಟನೆ ನಡೆಸಿ ಬಳಿಕ ಮಾತನಾಡಿದ ಅವರು, ರಮೇಶ್ ಕುಮಾರ್ ಮೂರ್ನಾಲ್ಕು ತಲೆಮಾರಿಗಾಗುಷ್ಟು ಎಂದಿದ್ದಾರೆ. ಬಿಜೆಪಿಯವರ ಹತ್ತಿರ ನೂರು ತಲೆಮಾರಿಗಾಗುವಷ್ಟಿದೆಯಲ್ಲಾ. ಅವರೋರ್ವ ಮೇಷ್ಟ್ರು, ದೊಡ್ಡಪೀಠದಲ್ಲಿ ಕುಳಿತು ಎಲ್ಲರಿಗೂ ಹೇಳಿದಂತವರು. ಅವರು ಹೇಳಿಕೆಯ ಉದ್ದೇಶವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ತ್ಯಾಗ ಬಲಿದಾನದ ಬಗ್ಗೆ ಅರ್ಥ ಮಾಡಿಕೊಳ್ಳಿ. ನೆಹರು ಅವರಂತೆ ಬಿಜೆಪಿಯವರು ಯಾರಾದರೂ ಜೈಲಿಗೆ ಹೋಗಿ ಬಂದಿದ್ದೀರಾ ಎಂದು ಪ್ರಶ್ನಿಸಿದರು.