ಹಾವೇರಿ :ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಮಾವೇಶ ಹಾನಗಲ್ನಲ್ಲಿ ಸೋಮವಾರ ಅದ್ಧೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಹಳೆ ಘಟನೆಗಳನ್ನು ಪಕ್ಷದ ರಾಜ್ಯಾಧ್ಯಕ್ಷ ಜನಾರ್ದನ ರೆಡ್ಡಿ ನೆನೆದರು. 2008ರಲ್ಲಿ ನಾನು ಮಾಡಿದ ಅಭಿವೃದ್ದಿ ಯೋಜನೆಗಳನ್ನೊಮ್ಮೆ ನೋಡಿ. 12 ವರ್ಷಗಳಲ್ಲಿ ಜನಾರ್ದನ ರೆಡ್ಡಿ ಈ ರೀತಿ ಮಾಡಿದರೆ ಮುಂದೆ ಇನ್ನೆಷ್ಟು ಅಭಿವೃದ್ಧಿ ಮಾಡಬಹುದು ಎಂದು ಊಹಿಸಿಕೊಳ್ಳಿ ಎಂದರು.
"ನನ್ನನ್ನು ವೈರಿಯಂತೆ 12 ವರ್ಷದಿಂದ ಸಾರ್ವಜನಿಕ ಬದುಕಿನಿಂದ ದೂರವಿಟ್ಟರು. ಬಳ್ಳಾರಿಗೆ ಬರುವುದನ್ನೂ ತಡೆದರು. ಬೆಳ್ಳಗಿರುವುದೆಲ್ಲ ಹಾಲು ಎಂದು ತಿಳಿದಿದ್ದ ನಾನು ಬಲೆಗೆ ಬಿದ್ದೆ. ಯಾವ ರೀತಿ ಮೀನು ಹಿಡಿಯಲು ಬಲಿ ಹಾಕುತ್ತಾರೋ ಅದೇ ರೀತಿ ನನ್ನನ್ನು ಬಲೆಗೆ ಬೀಳಿಸಿದರು. ಆದರೆ ನನಗೆ ಬಲೆ ಹಾಕಿರುವುದು ಗೊತ್ತಿರಲಿಲ್ಲ" ಎಂದರು.
"ರಾಜಕೀಯ ಎಂದರೆ ಮೋಸ, ತಂತ್ರ, ಕುತಂತ್ರ, ದ್ವೇಷ, ಸುಳ್ಳು, ಒಬ್ಬರ ಬೆನ್ನ ಮೇಲೆ ಕಾಲಿಟ್ಟು ಮತ್ತೊಬ್ಬರ ತಲೆಮೇಲೆ ಕಾಲಿಟ್ಟು ಮೇಲೆ ಬರುವುದು ಎಂದು ಅನುಭವಸ್ಥರು ಹೇಳಿದ್ದರು. ಆದರೆ ಭಗವಂತ ತುಂಬ ದೊಡ್ಡವನು. ಮನುಷ್ಯ ಎಷ್ಟೇ ಬೀಳಲು ಯತ್ನಿಸಿದರೂ ದೇವರು ಬೀಳಿಸುವವರೆಗೆ ಬೀಳುವುದಿಲ್ಲ. ನನಗೆ ತೊಂದರೆ ನೀಡಿದವರೆಲ್ಲ ಇವತ್ತು 20 ರಿಂದ ಮೂವತ್ತು ಮಾತ್ರೆ ತೆಗೆದುಕೊಂಡು ಮಲಗುತ್ತಿದ್ದಾರೆ. ಆದರೆ ಒಂದೇ ಒಂದು ಮಾತ್ರೆ ತಗೆದುಕೊಳ್ಳದೇ ನಾನು ಮಲಗುತ್ತಿದ್ದೇನೆ" ಎಂದು ಹೇಳಿದರು.
"ರಾಜಕೀಯ ಕುತಂತ್ರದಿಂದ ಬೇಸತ್ತು ರಾಜಕೀಯದಿಂದ ನಾನು ಬಹಳ ದೂರ ಇದ್ದೆ. ನನ್ನ ಹೆಂಡತಿ ಮಕ್ಕಳ ಜೊತೆ ಆರಾಮಾಗಿದ್ದೆ. ಆದರೆ ನಾನು ಬಳ್ಳಾರಿಯಲ್ಲಿದ್ದರೆ ಅವರಿಗೆ ತೊಂದರೆಯಾಗುತ್ತದೆ ಎಂದು ನನ್ನನ್ನು ಬಳ್ಳಾರಿಯಿಂದ ದೂರ ಮಾಡಿದರು. ಇದರಿಂದ ಬೇಸತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿದ್ದೇನೆ" ಎಂದು ತಿಳಿಸಿದರು.