ರಾಣೆಬೆನ್ನೂರು: ಉಪಚುನಾವಣೆಯ ಕಾವೇರಿರುವ ಮಧ್ಯೆ ರಾಣೆಬೆನ್ನೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಕೋಳಿವಾಡ ನಿವಾಸಗಳ ಮೇಲೆ ಐಟಿ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಶಾಸಕ ಕೆ.ಬಿ. ಕೋಳಿವಾಡ ನಿವಾಸದ ಮೇಲೆ ಐಟಿ ದಾಳಿ ಇಲ್ಲಿನ ವಾಗೀಶ್ ಬಡಾವಣೆಯಲ್ಲಿಯಲ್ಲಿರುವ ಕೋಳಿವಾಡ ಮನೆ ಮೇಲೆ ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಅಧಿಕಾರಿಗಳ ತಂಡ ದಾಳಿ ಮಾಡಿ, 1 ಗಂಟೆಯ ಕಾಲ ಪರಿಶೀಲಿಸಿದೆ.
ಸಾರ್ವಜನಿಕರ ದೂರಿನ ಮೇರೆಗೆ ಕೋಳಿವಾಡರ ಮನೆಯಲ್ಲಿ 10 ಕೋಟಿ ಹಣ ಹಾಗೂ ಅಕ್ರಮ ಮದ್ಯ ಸಂಗ್ರಹ ಶಂಕೆಯ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ದಾಳಿ ನಂತರ ಯಾವುದೇ ಹಣ ಹಾಗೂ ಮದ್ಯ ಸಿಗದೇ ಅಧಿಕಾರಿಗಳು ವಾಪಸ್ ಹೋಗಿದ್ದಾರೆ.
ಕಾರ್ಯಕರ್ತರ ದಿಢೀರ್ ಪ್ರತಿಭಟನೆ..
ಕೋಳಿವಾಡರ ಮನೆ ಮೇಲೆ ಐಟಿ ದಾಳಿ ವಿಷಯ ತಿಳಿಯುತ್ತಿದಂತೆ, ನೂರಾರು ಕಾಂಗ್ರೆಸ್ ಕಾರ್ಯಕರ್ತರ ಮನೆ ಬಳಿ ಜಮಾಯಿಸಿ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕೆಲಕಾಲ ಕೋಳಿವಾಡ ನಿವಾಸದ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿ, ಪೊಲೀಸರ ಜೊತೆ ವಾಗ್ವಾದ ನಡೆಸಿದರು. ಸುಮಾರು 1 ಗಂಟೆಗಳ ಕಾಲ ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು.
ಸಿಎಂ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ದಾಳಿ ಮಾಡಿದ್ದಾರೆ ಎಂದು ಕೋಳಿವಾಡ ಬೆಂಬಲಿಗರು ಆರೋಪಿಸಿದರು. ಮನೆಯ ಸುತ್ತಮುತ್ತ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.
ದಾಳಿ ವೇಳೆ ಏನೂ ಸಿಕ್ಕಿಲ್ಲ:
ದಾಳಿ ನಂತರ ಅಬಕಾರಿ ಆಯುಕ್ತ ನಾಗಶಯನ ಮಾತನಾಡಿ, ದಾಳಿ ವೇಳೆ ನಮಗೆ ಏನೂ ದೊರೆತಿಲ್ಲ. ಇದನ್ನು ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗುವುದು ಎಂದರು.