ರಾಣೆಬೆನ್ನೂರು: ನಗರದಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿ ವಿಳಂಬವಾಗುತ್ತಿದ್ದು, ಉದ್ಘಾಟನೆ ಭಾಗ್ಯ ಸಿಗುತ್ತಿಲ್ಲ.
ಉದ್ಘಾಟನೆ ಭಾಗ್ಯ ಕಾಣದ ಇಂದಿರಾ ಕ್ಯಾಂಟೀನ್ ಬಡವರು ಹಾಗೂ ನಿರ್ಗತಿಕರನ್ನ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಮಹತ್ವಪೂರ್ಣ ಯೋಜನೆ ಇಂದಿರಾ ಕ್ಯಾಂಟೀನ್ ರಾಜ್ಯದಲ್ಲಿ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಹಾವೇರಿ ಹಾಗೂ ರಾಣೆಬೆನ್ನೂರು ನಗರದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು. ಹಾವೇರಿ ನಗರದಲ್ಲಿ ಈಗಾಗಲೆ ಕ್ಯಾಂಟೀನ್ ಉದ್ಘಾಟನೆಗೊಂಡಿದೆ. ಆದರೆ, ರಾಣೆಬೆನ್ನೂರು ನಗರದ ಹಳೆ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಿರ್ಮಾಣ ಮಾಡುತ್ತಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿ ವಿಳಂಬವಾಗುತ್ತಿದ್ದು, ಉದ್ಘಾಟನೆ ಭಾಗ್ಯ ಸಿಗುತ್ತಿಲ್ಲ.
ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣ ಮಾಡಲು ಕೆಇಎಫ್ ಸಂಸ್ಥೆಗೆ ಗುತ್ತಿಗೆ ನೀಡಿದೆ. ಕಟ್ಟಡಕ್ಕೆ 28 ಲಕ್ಷ ರೂ. ಹಾಗೂ ಅಡುಗೆ ಕೋಣೆ ನಿರ್ಮಾಣಕ್ಕೆ 48 ಲಕ್ಷ ರೂ. ಅನುದಾನ ಬಳಸಿಕೊಂಡು ನಿರ್ಮಾಣ ಮಾಡಲಾಗುತ್ತಿದೆ. ಪ್ರತಿ ಕ್ಯಾಂಟೀನ್‌ನಿಂದ ಒಂದು ಅವಧಿಗೆ ಗರಿಷ್ಠ 500 ಜನರಿಗೆ 5 ರೂ.ಗೆ ಉಪಹಾರ, 10 ರೂ.ಗೆ ಊಟ ದೊರೆಯಲಿದೆ. ಇಂತಹ ಯೋಜನೆಯನ್ನು ಅಧಿಕಾರಿಗಳು ಆದಷ್ಟು ಬೇಗ ಪೂರ್ಣಗೊಳಿಸಬೇಕಾಗಿದೆ. ಆದರೆ, ಜನಪ್ರತಿನಿಧಿಗಳ ಆಲಸ್ಯ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇಂದಿರಾ ಕ್ಯಾಂಟಿನ್ ಉದ್ಘಾಟನೆಗೊಂಡಿಲ್ಲ.
80 ರಷ್ಟು ಕಾಮಗಾರಿ ಪೂರ್ಣ:
ಕಳೆದ 6 ತಿಂಗಳಿಂದ ನಗರದಲ್ಲಿ ನಿರ್ಮಿಸಲಾಗುತ್ತಿರುವ ಕ್ಯಾಂಟೀನ್ ಕಾಮಗಾರಿ ಶೇ.80 ರಷ್ಟು ಪೂರ್ಣಗೊಂಡಿದೆ. ಕಟ್ಟಡ ಸುತ್ತಲೂ ನಗರಸಭೆ ವತಿಯಿಂದ ತಡೆಗೋಡೆ ನಿರ್ಮಾಣ ಮಾಡಲಾಗಿದೆ.