ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸೋಲುಂಡ ಬಿಜೆಪಿಗೆ ವಿಧಾನಪರಿಷತ್ ಚುನಾವಣೆಯಲ್ಲೂ(Legislative council election) ಮತ್ತೊಮ್ಮೆ ಸೋಲಿನ ಆತಂಕ ಎದುರಾಗಿದೆ.
ಹಾವೇರಿಯಲ್ಲಿಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ್ ಹಾವೇರಿ, ನನ್ನದು ಪ್ರದೀಪ್ ಶೆಟ್ಟರ್ ವಿರುದ್ಧದ ಹೋರಾಟವೇ ಹೊರತು ಬೇರೆ ಯಾವುದೇ ಪಕ್ಷದ ವಿರುದ್ಧ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ್ ಹಾವೇರಿ ಹಾವೇರಿ, ಗದಗ ಮತ್ತು ಧಾರವಾಡ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳಿಂದ ಆಯ್ಕೆಯಾಗುವ ಈ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ಹಾವೇರಿಯ ಎಪಿಎಂಸಿ ಅಧ್ಯಕ್ಷ ಮತ್ತು ಬಿಜೆಪಿಯ ಪ್ರಬಲ ಅಕಾಂಕ್ಷಿಯಾಗಿದ್ದ ತಮಗೆ ಟಿಕೆಟ್ ಸಿಗದ ಕಾರಣ ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ತಮ್ಮದು ಕೇವಲ ಪ್ರದೀಪ್ ಶೆಟ್ಟರ್‌ಗೆ ಬಿಜೆಪಿ ಟಿಕೆಟ್ ನೀಡಿದ್ದರ ವಿರುದ್ಧದ ಹೋರಾಟ ಎಂದಿದ್ದಾರೆ.
ಹಾವೇರಿ ಜಿಲ್ಲೆಯ ಜನ ಕೋವಿಡ್, ಪ್ರವಾಹ ಸೇರಿದಂತೆ ಹಲವು ಸಮಸ್ಯೆಗಳಿಂದ ನಲುಗಿದ ವೇಳೆ ಪ್ರದೀಪ್ ಶೆಟ್ಟರ್ ಈ ಕಡೆ ಮುಖ ಮಾಡಿರಲಿಲ್ಲ. ಈ ಕುರಿತಂತೆ ಪಕ್ಷದ ನಾಯಕರಿಗೆ ಮೂರು ಜಿಲ್ಲೆಯ ಮತದಾರರ ಜೊತೆ ಚರ್ಚಿಸುವಂತೆ ಮನವಿ ಮಾಡಿದ್ದೆ. ಆದರೂ ಪಕ್ಷದ ಮುಖಂಡರು ಪ್ರದೀಪ್ ಶೆಟ್ಟರ್ ಅನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ. ಹಾಗಾಗಿ ತಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ:ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಭಾರಿ ಹಾನಿ: ಸಂಜೆ ಅಧಿಕಾರಿಗಳ ತುರ್ತು ಸಭೆ ಕರೆದ ಸಿಎಂ
ತಮ್ಮ ಸ್ಪರ್ಧೆ ಏನೇ ಇದ್ದರೂ ಪ್ರದೀಪ್ ಶೆಟ್ಟರ್ ವಿರುದ್ಧವೇ ಹೊರತು ಬಿಜೆಪಿ, ಕಾಂಗ್ರೆಸ್ ವಿರುದ್ಧ ಅಲ್ಲ ಎಂದು ಮಲ್ಲಿಕಾರ್ಜುನ್ ಸ್ಪಷ್ಟಪಡಿಸಿದ್ದಾರೆ. ಇದೇ 18 ರಂದು ಸಾಂಕೀತಕವಾಗಿ ನಾಮಪತ್ರ ಸಲ್ಲಿಸಿದ್ದು, 23 ರಂದು ಮತದಾರರ ಜೊತೆ ಸೇರಿಕೊಂಡು ಅದ್ಧೂರಿಯಾಗಿ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು. ಇನ್ನೂ ಬಿಜೆಪಿಯ ಯಾವ ಮುಖಂಡರು ಒತ್ತಾಯ ಮಾಡಿದ್ರೂ ಸಹ ತಾವು ನಾಮಪತ್ರ ವಾಪಸ್ ಪಡೆಯುವದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.