ಹಾವೇರಿ: ತಾಲೂಕಿನ ಕರ್ಜಗಿಯ ವರದಾ ನದಿ ಬ್ಯಾರೇಜ್ ಗೇಟ್ ಹಾಕಿರುವುದರಿಂದ ಕಣ್ಣುಹಾಯಿಸಿದಷ್ಟು ನೀರು ನಿಂತಿದೆ. ಇದರಿಂದ ಈ ಭಾಗದ ರೈತರು, ಸ್ಥಳೀಯರಲ್ಲಿ ಸಂತಸ ಮೂಡಿದೆ.
ತುಂಬಿ ತುಳುಕುತ್ತಿರುವ ವರದಾ ನದಿ ಬ್ಯಾರೇಜ್: ರೈತರ ಮೊಗದಲ್ಲಿ ಮಂದಹಾಸ
ಹಾವೇರಿ ತಾಲೂಕಿನಲ್ಲಿರುವ ಕರ್ಜಗಿಯ ವರದಾ ನದಿ ಬ್ಯಾರೇಜ್ ತುಂಬಿ ತುಳುಕುತ್ತಿದ್ದು, ಈ ಭಾಗದ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಈ ಬ್ಯಾರೇಜ್ ಸವಣೂರು ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ರೈತರ ಜಮೀನುಗಳು ನೀರುಣಿಸಲಿದೆ. ಅಲ್ಲದೆ ಸಾವಿರಾರು ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಲಿದೆ. ಕರ್ಜಗಿ ವರದಾ ನದಿಯಿಂದ ಸುತ್ತುವರೆದಿದ್ದು, ನೀರು ಇರುವಾಗಲೇ ಬ್ಯಾರೇಜ್ಗೆ ಗೇಟ್ ಹಾಕಲಾಗಿದೆ. ವರದಾ ನದಿಯ ನೀರು ಅತ್ಯಂತ ರುಚಿಕರವಾಗಿದ್ದು, ಈ ನೀರನ್ನು ಕುಡಿಯಲು ಉಪಯೋಗಿಸಲಾಗುತ್ತದೆ. ಈ ಬಾರಿ ಬೇಸಿಗೆಯಲ್ಲಿ ನೀರಿನ ಬವಣೆ ತೀರಿಸಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ.
ಮಳೆಗಾಲ ಮುಗಿಯುತ್ತಿದ್ದಂತೆ ಪ್ರತಿವರ್ಷ ಗೇಟ್ ಹಾಕಲಾಗುತ್ತಿತ್ತು. ಆದರೆ ಈ ವರ್ಷ ಅಧಿಕ ಮಳೆಯಾಗಿದ್ದರಿಂದ ನದಿ ನೀರನ್ನು ತಡೆ ಹಿಡಿಯಲಾಗಿದೆ. ಪ್ರತಿವರ್ಷ ಬ್ಯಾರೇಜ್ ಕಟ್ಟುವುದರಿಂದ ಇಲ್ಲಿ ಹೂಳು ನಿಲ್ಲುತ್ತದೆ. ಸುಮಾರು 15 ಅಡಿಗಳಷ್ಟು ಹೂಳು ನಿಲ್ಲುವುದರಿಂದ ನೀರಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಈ ಹೂಳು ತಗೆಯುವ ಮೂಲಕ ಗೇಟ್ ಹಾಕಿದರೆ ಇನ್ನೂ ಹೆಚ್ಚು ಅನುಕೂಲವಾಗುತ್ತೆ ಎನ್ನುತ್ತಾರೆ ಗ್ರಾಮಸ್ಥರು.