ರಾಣೆಬೆನ್ನೂರು: ತಾಲೂಕಿನಲ್ಲಿ ಶಿವರಾತ್ರಿ ಹಬ್ಬ ಜೋರಾಗಿದೆ. ಸುತ್ತಲಿನ ಹಳ್ಳಿಗಳಲ್ಲಿ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿ ಜತೆಗೆ ಹಬ್ಬವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತಿದೆ.
ಅಜ್ಞಾನದ ಅಂಧಕಾರವ ತೊಲಗಿಸಿ, ಸತ್ಯ ಜ್ಞಾನಪ್ರಕಾಶವನ್ನ ವಿಶ್ವಕ್ಕೆ ದಯಪಾಲಿಸಲು ಜ್ಞಾನ ಸೂರ್ಯನಾದ ಪರಮಾತ್ಮನ ಆಗಮನವೇ ಸತ್ಯ ಶಿವರಾತ್ರಿ ಹಬ್ಬ. ಇಂದು ಶಿವರಾತ್ರಿ ಉಪವಾಸ, ಜಾಗರಣೆ ಮಾಡಿ ಶಿವ ಸ್ಮರಣೆ ಮಾಡಲು ಭಕ್ತರು ಸಹ ಸಜ್ಜಾಗಿದ್ದಾರೆ. ಸಹಸ್ರನಾಮ ಪಠಣ, ಸಂಕೀರ್ತನೆ, ಪುರಾಣ ಪಠಣ, ಸಂಗೀತೋತ್ಸವ ಮತ್ತು ಅಹೋರಾತ್ರಿ ಶಿವನಾಮ ಜಪ ನಡೆಯಲಿದೆ. ಶಿವನ ಆರಾಧಕರು ಜಾಗರಣೆ ನಡೆಸಲು ವಿವಿಧ ದೇವಸ್ಥಾನಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಬೇಸಿಗೆ ಮತ್ತು ಶಿವರಾತ್ರಿ ಹಬ್ಬದ ದೆಸೆಯಿಂದ ಕಲ್ಲಂಗಡಿಗೆ ಹೆಚ್ಚಿದ ಬೇಡಿಕೆ ಸಂಜೆ ಶಿವನ ದರ್ಶನ ಪಡೆದ ನಂತರವೇ ಹಣ್ಣುಗಳನ್ನು ಸ್ವೀಕರಿಸುತ್ತಾರೆ. ಹೀಗಾಗಿ ಶಿವರಾತ್ರಿ ಹಬ್ಬ ಬಂದರೆ ಸಾಕು ನಗರದ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಹಣ್ಣುಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ. ಅದರಲ್ಲಿ ಪ್ರಮುಖವಾಗಿ ದ್ರಾಕ್ಷಿ ಕೆಜಿಗೆ 80 ರೂ., ಕರ್ಜೂರ ಕೆಜಿಗೆ 80 ರಿಂದ 100 ರೂ., ಬಾಳೆಹಣ್ಣು 50 ರೂ., ಕಲ್ಲಂಗಡಿ 20 ರಿಂದ 30 ರೂ., ಚಿಕ್ಕು 10 ರೂ.ಗೆ 5ರಿಂದ 6 ಹಣ್ಣು, ಕರಬೂಜ ಹತ್ತು ರೂ.ಗೆ ಒಂದರಂತೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ.
ಜನ ಬಿಸಿಲಿನ ತಾಪದಿಂದ ಪಾರಾಗಲು ಕಲ್ಲಂಗಡಿ ಹಣ್ಣುಗಳತ್ತ ಮುಖ ಮಾಡಿದ್ದರಿಂದ ಬೇಡಿಕೆ ಹೆಚ್ಚಾಗಿದೆ. ರಸ್ತೆಗೆ ಹೊಂದಿಕೊಂಡಂತೆ ಖಾಲಿ ಜಾಗಗಳಲ್ಲಿ ಹಣ್ಣಿನ ರಾಶಿ ಹಾಕಿಕೊಳ್ಳುವ ವ್ಯಾಪಾರಿಗಳು ತಿಂಗಳುಗಟ್ಟಲೇ ಬಿಡಾರ ಹೂಡಿ ವ್ಯಾಪಾರಕ್ಕೆ ಮುಂದಾಗಿದ್ದಾರೆ.