ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ಸುತ್ತಮುತ್ತಲು ಇರುವ ಗ್ರಾಮಗಳಿಗೆ ಮಳೆಗಾಲ ಆರಂಭವಾಯಿತು ಅಂದ್ರೆ ಸಾಕು ಆತಂಕ ಶುರುವಾಗುತ್ತೆ. ಜಿಲ್ಲಾ ಕೇಂದ್ರದಿಂದ 10 ಕಿ.ಮೀ ದೂರದಲ್ಲಿರುವ ಸುಮಾರು 25 ಗ್ರಾಮಗಳ ಜನರ ಆತಂಕಕ್ಕೆ ಕಾರಣ ವರದಾ ನದಿ.
ವರದಾ ಮೈದುಂಬಿ ಹರಿದರೆ 25 ಗ್ರಾಮಗಳ ಸಂಪರ್ಕ ಕಡಿ ವರದಾ ಜಲಾನಯನ ಪ್ರದೇಶಗಳಲ್ಲಿ ಮಳೆಯಾದರೆ ಸಾಕು ವರದಾ ನದಿ ಮೈದುಂಬಿ ಹರಿಯಲಾರಂಭಿಸುತ್ತದೆ. ಈ ನದಿ ಮೈದುಂಬಿದರೆ ಹಾವೇರಿ ಮತ್ತು 25 ಕ್ಕೂ ಅಧಿಕ ಗ್ರಾಮಗಳನ್ನು ಸಂಪರ್ಕಿಸುವ ಸವಣೂರು ತಾಲೂಕಿನ ಕಳಸೂರು ಸೇತುವೆ ಮುಳುಗಡೆಯಾಗುತ್ತೆ. ಪರಿಣಾಮ, ಈ ಸೇತುವೆಯನ್ನು ಅವಲಂಭಿಸಿರುವ ಸುಮಾರು 25 ಕ್ಕೂ ಅಧಿಕ ಗ್ರಾಮಗಳ ಜನರು ಜಿಲ್ಲಾಕೇಂದ್ರಕ್ಕೆ ಬರಲು ಹರಸಾಹಸಪಡುತ್ತಾರೆ.
10 ಕಿ.ಮೀ ದೂರದ ಜಿಲ್ಲಾ ಕೇಂದ್ರ ವರದಾ ನದಿ ತುಂಬಿದರೆ ಬೇರೆ ಮಾರ್ಗದಿಂದ ಬರಬೇಕಾದರೆ 30 ಕಿ.ಮೀ ದೂರವಾಗುತ್ತದೆ. ಸೇತುವೆ ಎತ್ತರ ಹೆಚ್ಚಿಸಿ ಎಂದು ಜಿಲ್ಲಾಡಳಿತಕ್ಕೆ ಗ್ರಾಮಸ್ಥರು ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಇದನ್ನೂ ಓದಿ: ಮಳೆಯ ಆರ್ಭಟಕ್ಕೆ ಕೆರೆಗಳಂತಾದ ಜಮೀನುಗಳು.. ಬಿತ್ತನೆ ಮಾಡಿದ್ದೆಲ್ಲ ನೀರಲ್ಲಿ ಹೋಮ
ಪ್ರತಿವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆ ಈ ಸಮಸ್ಯೆ ತಲೆದೋರುತ್ತೆ. ಹಲವು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಸಮಸ್ಯೆಗಳನ್ನು ತಿಳಿಸಲಾಗಿದೆ. ಈ ವರ್ಷವಾದರೂ ಸೇತುವೆ ಎತ್ತರ ಮಾಡಿ ತಮ್ಮ ಸಮಸ್ಯೆ ದೂರ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.