ಹಾವೇರಿ:ಸಿಎಂ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ವೇಳೆ ನನಗೂ ಸ್ಥಾನ ನೀಡಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ಕೆಲಸ ಮಾಡುವುದಾಗಿ ಹಾವೇರಿ ಶಾಸಕ ನೆಹರು ಓಲೇಕಾರ್ ಹೇಳಿದ್ದಾರೆ.
ನಾನೂ ಸಚಿವ ಸ್ಥಾನದ ಆಕಾಂಕ್ಷಿ: ನೆಹರು ಓಲೇಕಾರ್ - ಗೆದ್ದವರಿಗೆ ಸಚಿವಸ್ಥಾನ ನೀಡಲಿ
ಸಿಎಂ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ವೇಳೆ ನನಗೂ ಸ್ಥಾನ ನೀಡಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ಕೆಲಸ ಮಾಡುವುದಾಗಿ ಹಾವೇರಿ ಶಾಸಕ ನೆಹರು ಓಲೇಕಾರ್ ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯಲ್ಲಿ ನಾಯಕರಿಗೆ ಹಲವು ಸಮಸ್ಯೆಗಳಿದ್ದು, ಎಲ್ಲಾ ಜಾತಿಗಳಿಗೂ ಪ್ರಾತಿನಿಧ್ಯ ಸಿಕ್ಕರೆ ಸಚಿವ ಸಂಪುಟಕ್ಕೆ ಹೆಚ್ಚಿನ ಗೌರವ ಬರುತ್ತದೆ ಎಂದು ನೆಹರು ಓಲೇಕಾರ್ ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ನನಗೂ ಸಚಿವ ಸ್ಥಾನ ನೀಡುತ್ತಾರೆ ಎಂಬ ಭರವಸೆ ಇದೆ. ಅನರ್ಹ ಶಾಸಕರ ತ್ಯಾಗದಿಂದಲೇ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅವರಿಗೆ ಸಚಿವ ಸ್ಥಾನ ನೀಡುವ ಕುರಿತಂತೆ ನಮ್ಮಲ್ಲಿ ಯಾವುದೇ ತಕರಾರಿಲ್ಲ. ಗೆದ್ದವರಿಗೆ ಸಚಿವ ಸ್ಥಾನ ನೀಡಲಿ, ಸೋತವರಿಗೆ ಯಾವುದಾದರೂ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಸಮಾಧಾನಪಡಿಸಬೇಕು ಎಂದು ಓಲೇಕಾರ್ ಹೇಳಿದರು.
ಸೋತವರಿಗೆ ಸಚಿವ ಸ್ಥಾನ ನೀಡುವುದು ಎಷ್ಟು ಸರಿ ಎಂದು ಜನಸಾಮಾನ್ಯರು ಪ್ರಶ್ನಿಸುತ್ತಾರೆ. ಹಾಗಾಗಿ ಅವರಿಗೆ ನಿಗಮ ಮಂಡಳಿ ನೀಡುವುದು ಉತ್ತಮ. ಹಿರಿಯರನ್ನ ಪಕ್ಷದ ಸಂಘಟನೆಗೆ ಬಳಸಿಕೊಂಡು ಹೊಸಬರಿಗೆ ಸಚಿವ ಸ್ಥಾನ ನೀಡುವ ವಿಚಾರ ಸಹ ಸೂಕ್ತವಾಗಿದೆ. ಎಲ್ಲಾ ರೀತಿಯಲ್ಲೂ ಸಚಿವ ಸ್ಥಾನ ಪಡೆಯಲು ಯತ್ನಿಸಲಾಗುತ್ತಿದೆ. 17 ಶಾಸಕರ ತ್ಯಾಗದಿಂದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅವರಿಗಾಗಿ ಯಾವ ತ್ಯಾಗಕ್ಕೂ ನಮ್ಮವರು ಸಿದ್ಧರಿದ್ದಾರೆ ಎಂದರು.