ಹಾವೇರಿ:ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕು ಎನ್ನುವುದು ಮುಗಿದ ವಿಚಾರ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವತಃ ಸಿದ್ದರಾಮಯ್ಯನವರೇ ಈ ಕುರಿತಂತೆ ಉತ್ತರ ನೀಡಿದ್ದಾರೆ. ಸದ್ಯ ಸಿಎಂ ಖುರ್ಚಿ ಖಾಲಿ ಇಲ್ಲ. ಮುಂದೂಮ್ಮೆ ಮತ್ತೆ ಜನಾದೇಶ ಬಂದರೆ ಅವರು ಮುಖ್ಯಮಂತ್ರಿಯಾಗುತ್ತೇವೆ ಎಂದಿದ್ದಾರೆ. ಮೈತ್ರಿ ಸರ್ಕಾರದ ಅಪಸ್ವರಗಳಿಗೆಲ್ಲ ಕಳೆದ ರಾತ್ರಿ ಪೂರ್ಣ ವಿರಾಮ ಹಾಕಲಾಗಿದೆ ಎಂದರು.
ಹೆಚ್.ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ ಮೈತ್ರಿ ಸರ್ಕಾರದ ಒತ್ತಡದಿಂದ ಸಚಿವ ಶಿವಳ್ಳಿ ಸಾವನ್ನಪ್ಪಿದರು ಎಂಬ ಶ್ರೀರಾಮುಲು ಹೇಳಿಕೆ ಬಾಲಿಶವಾದ ಹೇಳಿಕೆಯಾಗಿದೆ. ಯಾರ ಸಾವಿಗೆ ಯಾರು ಹೊಣೆಯಲ್ಲ. ಈ ಕುರಿತಂತೆ ಮಾತನಾಡಬಾರದು, ನಂಬಲುಬಾರದು ಎಂದರು.
ನಮ್ಮ ಭಾರತ ಚುನಾವಣಾ ಆಯೋಗ ವಿಭಿನ್ನವಾದ ಹಾಗೂ ಕಟ್ಟುನಿಟ್ಟಾದ ಷರತ್ತುಗಳನ್ನು ಹೊಂದಿದೆ. ಶಿಷ್ಟಚಾರದ ಹೆಸರಿನಲ್ಲಿ ಸುಮಾರು ಮೂರು ತಿಂಗಳ ಕಾಲ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗದೇ ಅಡ್ಡಿಯಾಗಿದೆ. ಶಿಷ್ಟಚಾರದ ಹೆಸರಿನಲ್ಲಿ ಚುನಾವಣಾ ಆಯೋಗ ಕಿರುಕುಳ ಜೊತೆಗೆ ಅಭಿವೃದ್ಧಿಗೆ ಅಡೆತಡೆ ಮಾಡುತ್ತಿದೆ ಎಂದು ಆರೋಪಿಸಿದರು. ಮುಂದೆ ಬರುವ ಸರ್ಕಾರಗಳು ಈ ಕುರಿತಂತೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಕಾಗಿನೆಲೆ ಶ್ರೀಗಳು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಕಾಗಿನೆಲೆ ನಿರಂಜನಾನಂದ ಶ್ರೀಗಳು ಕೂಡ ಮತದಾರರು. ಮತದಾರರಾಗಿ ಯಾರನ್ನು ಬೇಕಾದರು ಮುಖ್ಯಮಂತ್ರಿಯಾಗಲಿ ಎಂದು ಹಾರೈಸಬಹುದು ಎಂದು ಸಮಜಾಯಿಸಿ ನೀಡಿದರು.