ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲೂಕಿನ ರಾಮನಕೊಪ್ಪ ಕ್ರಾಸ್ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ವ್ಯಕ್ತಿ ಕೊಲೆಯಾಗಿರುವುದು ದೃಢಪಟ್ಟಿದೆ.
ಕೊಲೆಯಾದ ವ್ಯಕ್ತಿಯನ್ನು ಧಾರವಾಡ ಜಿಲ್ಲೆಯ ಕಲಘಟಕಿ ತಾಲೂಕಿನ ಗುಡ್ಡದಹುಲಿಕಟ್ಟಿ ಗ್ರಾಮದ ನಿವಾಸಿ ಶಿವಾನಂದ ಎಂದು ಗುರುತಿಸಲಾಗಿದೆ. ಈತನ ಶವ ಸಿಕ್ಕ ವೇಳೆ ಅಪಘಾತ ಸಂಭವಿಸಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿತ್ತು. ಆದರೀಗ ಪತ್ನಿಯ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಹಿನ್ನೆಲೆಯಲ್ಲಿ ಈತ ಕೊಲೆಯಾಗಿರುವುದು ತನಿಖೆಯಿಂದ ಬಯಲಾಗಿದೆ. ಈ ಪ್ರಕರಣ ಸಂಬಂಧ ಪತ್ನಿ ಅನ್ನಪೂರ್ಣ ಹಾಗೂ ಯಲಪ್ಪ ಜೈಲು ಪಾಲಾಗಿದ್ದಾರೆ.
ಪ್ರಕರಣದ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ್ ಮಾಹಿತಿ ನೀಡಿದರು. ಹೆದ್ದಾರಿ ಬಳಿ ಪತಿಯ ಶಿವಾನಂದನ ಶವ ದೊರೆತಿದ್ದರೂ ಪತ್ನಿ ಅನ್ನಪೂರ್ಣ ಪ್ರಕರಣ ದಾಖಲಿಸಿರಲಿಲ್ಲ. ಹೀಗಾಗಿ ಅನುಮಾನಗೊಂಡ ಪೊಲೀಸರು ತನಿಖೆ ಕೈಗೊಂಡಾಗ ಅಸಲಿಯತ್ತು ಗೊತ್ತಾಗಿದೆ.
ಪ್ರಕರಣದ ಮತ್ತಷ್ಟು ವಿವರ:
ಕಲಘಟಗಿ ತಾಲೂಕಿನ ಗುಡ್ಡದಹುಲಿಕಟ್ಟಿ ಗ್ರಾಮದ ಶಿವಾನಂದ ಮತ್ತು ಅನ್ನಪೂರ್ಣ ವಿವಾಹವಾಗಿ 20 ವರ್ಷವಾಗಿತ್ತು. ಇವರಿಗೆ ಇಬ್ಬರು ಹೆಣ್ಣು, ಇಬ್ಬರು ಗಂಡುಮಕ್ಕಳಿದ್ದಾರೆ. ಆದರೆ ಶಿವಾನಂದ ಮದ್ಯವ್ಯಸನಿಯಾಗಿದ್ದ. ಇದರಿಂದ ಬೇಸತ್ತ ಪತ್ನಿ ಅನ್ನಪೂರ್ಣ ತವರುಮನೆ ಸೇರಿದ್ದಳು. ಶಿವಾನಂದನಿಗೆ ಪರಿಚಯವಿದ್ದ ಪರಸಾಪುರ ಗ್ರಾಮದ ಯಲ್ಲಪ್ಪ ಎಂಬುವನು ಅನ್ನಪೂರ್ಣ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಈ ಅನೈತಿಕ ಸಂಬಂಧಕ್ಕೆ ಪತಿ ಶಿವಾನಂದ ಅಡ್ಡಿಯಾಗಿದ್ದ ಎಂದು ಆತನನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ಕಂಠಪೂರ್ತಿ ಮದ್ಯ ಕುಡಿಸಿ ಕೊಲೆ
ಸೆ.29ರಂದು ಆರೋಪಿ ಎಲ್ಲಪ್ಪ ಹಾಗೂ ಶಿವಾನಂದ ಒಂದೇ ಬಾರ್ನಲ್ಲಿ ಮದ್ಯ ಸೇವನೆ ಮಾಡಿದ್ದಾರೆ. ಆ ಬಳಿಕ ರಾಷ್ಟ್ರೀಯ ಹೆದ್ದಾರಿ 4ರ ತಡಸ ಬಳಿ ಇರುವ ರಾಮನಕೊಪ್ಪ ಕ್ರಾಸ್ ಬಳಿ ಹೊಲಕ್ಕೆ ಕರೆದುಕೊಂಡು ಹೋಗಿದ್ದಾನೆ. ನಂತರ ಅಲ್ಲಿಯೇ ಇದ್ದ ಕಲ್ಲಿನಿಂದ ಶಿವಾನಂದನ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಹೀಗೆ ಕೊಲೆ ಮಾಡಿರುವ ಆರೋಪಿ ಯಲ್ಲಪ್ಪ ಇದಕ್ಕೂ ಮೊದಲು ತನ್ನ ಪತ್ನಿಯನ್ನು ಕೊಲೆ ಮಾಡಿ 10 ವರ್ಷ ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಬಂದಿದ್ದ ಎಂಬ ಮಾಹಿತಿ ದೊರೆತಿದೆ.