ಹಾವೇರಿ : ಸೆಲೆಬ್ರಿಟಿಗಳಿಗೆ ಅಭಿಮಾನಿಗಳು ಇರುವುದು ಸಾಮಾನ್ಯ. ಆದರೆ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸುವ ಹೋರಿಗಳಿಗೆ ಅಭಿಮಾನಿಗಳಿದ್ದಾರೆ. ನೂರಾರು ಅಭಿಮಾನಿಗಳನ್ನು ಗಳಿಸಿರುವ ಹೋರಿಗಳು ಜಿಲ್ಲೆಯಲ್ಲಿವೆ. ಅಂತಹ ಅಭಿಮಾನಿಯೊಬ್ಬ ತನ್ನ ನೆಚ್ಚಿನ ಹೋರಿಯ ಚಿತ್ರವನ್ನ ಗೋಡೆ ಮೇಲೆ ತೆಗೆಯುವ ಮೂಲಕ ಅಭಿಮಾನ ಮೆರೆದಿದ್ದಾನೆ. ಅರ್ಜುನ್ 155 ಹೆಸರಿರುವ ಎತ್ತಿನ ಚಿತ್ರ ಬರೆದಿದ್ದು ಇದರಿಂದಾಗಿ ನನಗೆ ಹೊಸ ಅವಕಾಶಗಳು ಸಿಕ್ಕಿವೆ ಎನ್ನುತ್ತಾರೆ ಈ ಕಲಾವಿದ ಕಮ್ ಅಭಿಮಾನಿ. ಅರ್ಜುನ್ 155 ಹೆಸರುಗಳನ್ನು ಅಭಿಮಾನಿಗಳು ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಅಭಿಮಾನ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕದ ಜಾನಪದ ಸೊಗಡಿನ ಕ್ರೀಡೆ ಎಂದರೆ ದನ ಬೆದರಿಸುವ ಸ್ಪರ್ಧೆ. ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನ ಬಾಚುವ ಹೋರಿಗಳು ಇದೀಗ ಅಭಿಮಾನಿಗಳನ್ನು ಗಳಿಸಲಾರಂಭಿಸಿವೆ. ಪ್ರಮುಖ ಹೋರಿಗಳಿಗೆ ಜಿಲ್ಲೆಯಲ್ಲಿ ಸಾವಿರಾರು ಅಭಿಮಾನಿಗಳಿದ್ದಾರೆ. ಅಂತಹ ಹೋರಿಗಳಲ್ಲಿ ಒಂದಾಗಿರುವ ಅರ್ಜುನ್ 155 ಅಭಿಮಾನಿಯೊಬ್ಬ ಹೋರಿಯ ಚಿತ್ರ ಗೋಡೆ ಮೇಲೆ ಬಿಡಿಸಿದ್ದಾನೆ. ಜಿಲ್ಲೆಯ ಬ್ಯಾಡಗಿ ತಾಲೂಕಿನ ಹೆಡಿಗೊಂಡದ ಕಲಾವಿದ ಫಕಿರೇಶ್ ಈ ಚಿತ್ರ ಬರೆಯುವ ಮೂಲಕ ಅಭಿಮಾನ ವ್ಯಕ್ತಪಡಿಸಿದ್ದಾನೆ. ತಾನು ಅರ್ಜುನ್ 155 ಹೋರಿಯ ಅಭಿಮಾನಿಯಾಗಿದ್ದು, ಅಭಿಮಾನಕ್ಕೋಸ್ಕರ ಚಿತ್ರ ಬಿಡಿಸಿದ್ದೇನೆ. ಈ ಚಿತ್ರ ಬಿಡಿಸಿದ ನಂತರ ತನಗೆ ಇನ್ನೂ ಹೆಚ್ಚಿನ ಅವಕಾಶ ದೊರೆತಿವೆ ಎನ್ನುತ್ತಾನೆ ಫಕಿರೇಶ್.