ಹಾವೇರಿ :ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯಲ್ಲಿ ರಂಗಪಂಚಮಿಯನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಜಿಲ್ಲೆಯಲ್ಲಿ ಹೋಳಿ ಹುಣ್ಣಿಮೆ ಬರುತ್ತಿದ್ದಂತೆ ಹಲವು ಸಂಪ್ರದಾಯಗಳನ್ನು ಆಚರಿಸಲಾಗುತ್ತದೆ. ಇಂತಹ ಆಚರಣೆಗಳಲ್ಲಿ ಒಂದು ಜೀವಂತ ಕಾಮ ಮತ್ತು ರತಿ ಸ್ಥಾಪನೆ ಮಾಡಲಾಗುತ್ತದೆ.
ಜೀವಂತ ಕಾಮರತಿ ನಗಿಸುವ ಸ್ಪರ್ಧೆ :ಜಿಲ್ಲೆಯ ರಾಣೆಬೆನ್ನೂರು ಮತ್ತು ಹಾವೇರಿ ನಗರದಲ್ಲಿ ಕಳೆದ ಕೆಲ ವರ್ಷಗಳಿಂದ ಜೀವಂತ ಕಾಮರತಿಯನ್ನು ಕುಳ್ಳಿರಿಸಲಾಗುತ್ತದೆ. ಅದಕ್ಕಾಗಿ ಒಂದು ವೇದಿಕೆ ಸಿದ್ದಪಡಿಸಿ ಅದರಲ್ಲಿ ಸಿಂಗಾರಗೊಂಡ ಕಾಮ ಮತ್ತು ರತಿಯನ್ನು ಕೂಡಿಸಲಾಗುತ್ತದೆ. ಈ ರೀತಿ ಕುಳ್ಳಿರಿಸಿ ಮನರಂಜನೆಗಾಗಿ ಅವರನ್ನು ನಗಿಸುವ ಸ್ಪರ್ಧೆ ಆಯೋಜಿಸಲಾಗುತ್ತದೆ. ಕಾಮರತಿಯನ್ನು ನಗಿಸಿದವರಿಗೆ ಆಕರ್ಷಕ ನಗದು ಬಹುಮಾನ ಇರಿಸಲಾಗಿರುತ್ತದೆ. ನಗದು ಬಹುಮಾನ ಗೆಲ್ಲಲು ಪ್ರೇಕ್ಷಕರು, ಅಭಿಮಾನಿಗಳು ದೂರ ದೂರದ ಊರುಗಳಿಂದ ಆಗಮಿಸಿ ಜೀವಂತ ಕಾಮ ರತಿ ನಗಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ. ಮಹಿಳೆಯರು ಮಕ್ಕಳು ವೃದ್ದರು ಸೇರಿದಂತೆ ಎಲ್ಲರೂ ಪ್ರಯತ್ನಿಸಿದರೂ ಕಾಮ ರತಿ ಮಾತ್ರ ಇದುವರೆಗೆ ನಕ್ಕಿಲ್ಲ. ಹಾಡು,ಹಾಸ್ಯ ಚಟಾಕಿ, ನೃತ್ಯ ಸೇರಿದಂತೆ ಏನು ಮಾಡಿದರೂ ಇದುವರೆಗೆ ಕಾಮ ರತಿ ನಕ್ಕಿಲ್ಲ. ನಗಿಸಲು ಬಂದವರು ಎಷ್ಟೇ ಪ್ರಯತ್ನಪಟ್ಟರೂ ಕಾಮರತಿ ಒಂದು ಕಿರುನಗೆಯನ್ನು ಬೀರುವುದಿಲ್ಲ.
ರಾಣೆಬೆನ್ನೂರಿನಲ್ಲಿ ಕಳೆದ 64 ವರ್ಷಗಳಿಂದ ಜೀವಂತ ಕಾಮರತಿ ಕುಳ್ಳಿರಿಸಲಾಗುತ್ತಿದೆ. ಪ್ರತಿವರ್ಷ ನಗರದ ಒಂದೊಂದು ಪ್ರದೇಶದಲ್ಲಿ ಕುಳ್ಳಿರಿಸಿ ಅವರ ನಗಿಸುವ ಪ್ರಯತ್ನ ಮಾಡಲಾಗುತ್ತದೆ. ಪ್ರಸ್ತುತ ವರ್ಷ ರತಿ ಪಾತ್ರಧಾರಿಯಾಗಿ ಕುಮಾರ ಹಡಪದ ಮತ್ತು ಕಾಮನ ಪಾತ್ರಧಾರಿಯಾಗಿ ಗದಿಗೆಪ್ಪ ದೊಡ್ಡಪ್ಪನವರ ಕುಳ್ಳಿರಿಸಲಾಗಿತ್ತು. ಇಬ್ಬರನ್ನು ನಗಿಸಿದವರಿಗೆ ಸುಮಾರು ನಾಲ್ಕು ಲಕ್ಷ ನಾಲ್ಕು ಸಾವಿರ ರೂಪಾಯಿ ಬಹುಮಾನ ಇಡಲಾಗಿತ್ತು. ನಗಿಸಲು ಬಂದವರೇ ನಗೆಪಾಟಲಿಗೆ ಒಳಗಾದರೆ ಹೊರತು ಕಾಮ ಮತ್ತು ರತಿ ಮಾತ್ರ ತುಟಿ ಪಿಟಿಕ್ ಎನ್ನಲಿಲ್ಲ.
ಹಾವೇರಿಯಲ್ಲೂ ಭರ್ಜರಿ ಆಚರಣೆ:ಇನ್ನು ಹಾವೇರಿ ನಗರದಲ್ಲಿ ಈ ರೀತಿ ಜೀವಂತ ಕಾಮ ರತಿಯನ್ನು ಕಳೆದ 11 ವರ್ಷದಿಂದ ಕುಳ್ಳಿರಿಸಲಾಗುತ್ತದೆ. ಪ್ರಸ್ತುತ ವರ್ಷ ಹಾವೇರಿಯ ಯಾಲಕ್ಕಿ ಓಣಿಯಲ್ಲಿ ಜೀವಂತ ಕಾಮ ರತಿಯನ್ನು ಕುಳ್ಳಿರಿಸಲಾಗಿತ್ತು. ಕಾಮನಾಗಿ ಗೂರಪ್ಪ ಶೀಮಿಕೇರಿ ಮತ್ತು ರತಿಯಾಗಿ ಲೈಂಗಿಕ ಅಲ್ಪಸಂಖ್ಯಾತೆ ತನುಶ್ರೀಯನ್ನು ಕುಳ್ಳಿರಿಸಲಾಗಿತ್ತು. ಹಾವೇರಿಯಲ್ಲಿ ಕುಳ್ಳಿರಿಸಿದ ಜೀವಂತ ಕಾಮರತಿ ನಗಿಸಲು ಆರಂಭದಲ್ಲಿ ಐದು ಸಾವಿರ ಬಹುಮಾನ ಇಡಲಾಗಿತ್ತು.