ಹಾವೇರಿ: ಸ್ವಾತಂತ್ರ್ಯ ಬಂದಾಗಿನಿಂದ ನಡೆದ ಹಾನಗಲ್ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಜಾತಿ, ಧರ್ಮ, ಪಕ್ಷಕ್ಕೆ ಮಣೆ ಹಾಕಿಲ್ಲ. ಎಂತಹ ಘಟಾನುಘಟಿಗಳಿಗೂ ಸೋಲಿನ ರುಚಿ ತೋರಿಸಿದ್ದಾರೆ. ಜೊತೆಗೆ ಒಂದು ಬಾರಿ ಗೆಲ್ಲಿಸಿದ ಅಭ್ಯರ್ಥಿಯನ್ನು ಮತ್ತೊಮ್ಮೆ ಗೆಲ್ಲಿಸಿದ ಉದಾಹರಣೆಗಳು ಸಹ ಇವೆ. ಪ್ರಸ್ತುತ ಹಾನಗಲ್ ವಿಧಾನಸಭಾ ಕ್ಷೇತ್ರ ಎರಡನೇ ಬಾರಿ ಉಪಚುನಾವಣೆ ಎದುರಿಸುತ್ತಿದೆ. ಇಲ್ಲಿನ ಮತದಾರರು ಮಾತ್ರ ಈವರೆಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದೇ 30ರಂದು ಮತದಾನ ನಡೆಯಲಿದ್ದು, ನ. 2ರಂದು ಮತಎಣಿಕೆ ನಡೆದ ನಂತರವಷ್ಟೇ ಮತದಾರರ ನಿರ್ಧಾರ ಬಹಿರಂಗವಾಗಲಿದೆ.
ಹಾನಗಲ್ ಕ್ಷೇತ್ರ ಇತಿಹಾಸ..
ಮಲೆನಾಡು ಸೀಮೆಗೆ ಹೊಂದಿಕೊಂಡಿರುವ ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭೆ ಕ್ಷೇತ್ರ ಮಾಜಿ ಸಚಿವ ದಿ. ಸಿ.ಎಂ. ಉದಾಸಿ ಅವರ ಭದ್ರಕೋಟೆ. ಈ ಭದ್ರಕೋಟೆಗೆ ಆಗಾಗ್ಗೆ ಮನೋಹರ ತಹಸೀಲ್ದಾರ್ ಲಗ್ಗೆ ಇಟ್ಟಿದ್ದರೂ ಉದಾಸಿ ಕೋಟೆ ಬೇಧಿಸಲು ಕಳೆದ ಎರಡು ಅವಧಿಯಿಂದ ಸಾಧ್ಯವಾಗಿಲ್ಲ. ಹಾನಗಲ್ ಕ್ಷೇತ್ರದಲ್ಲಿ 1957 ರಿಂದ 2008 ರವರೆಗೆ ನಡೆದ 12ವಿಧಾನಸಭಾ ಚುನಾವಣೆಗಳಲ್ಲಿ ಆಯ್ಕೆಯಾದ ಮತ್ತು ಸೋತ ಅಭ್ಯರ್ಥಿಗಳ ಮಾಹಿತಿ ಹೀಗಿವೆ..
- 1957- ಪ್ರಥಮ ಚುನಾವಣೆಯಲ್ಲಿ ಹಾನಗಲ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಬಿ.ಆರ್. ಪಾಟೀಲ 13,152 ಮತಗಳಿಸಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಸಿ. ಸಿಂಧೂರ(12,303 ಮತ) ಅವರನ್ನು ಮಣಿಸಿದ್ದರು.
- 1962- ಎರಡನೇ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎನ್. ದೇಸಾಯಿ 19,843 ಮತ ಗಳಿಸಿ ಆಯ್ಕೆಯಾದರು. ಪ್ರಥಮ ಬಾರಿಗೆ ಆಯ್ಕೆಯಾಗಿದ್ದ ಬಿ.ಆರ್. ಪಾಟೀಲ ಈ ಚುನಾವಣೆಯಲ್ಲಿ ಪ್ರಜಾ ಸೋಷಲಿಸ್ಟ್ ಪಾರ್ಟಿಯ ಅಭ್ಯರ್ಥಿಯಾಗಿ ಕಣಕ್ಕಿಳಿದು 18,890 ಮತಗಳಿಸಿ ಸ್ವಲ್ಪ ಅಂತರದಲ್ಲೇ ಸೋಲು ಕಂಡರು.
- 1967- ಮೂರನೇ ಚುನಾವಣೆಯಲ್ಲಿ ಬಿ.ಆರ್. ಪಾಟೀಲರು ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು 18,742 ಮತ ಗಳಿಸಿ ಆಯ್ಕೆಯಾದರೆ, ಕಾಂಗ್ರೆಸ್ ಅಭ್ಯರ್ಥಿ ಎಸ್.ಸಿ. ಸಿಂಧೂರ 16,781 ಮತ ಗಳಿಸಿ ಎರಡನೇ ಬಾರಿ ಬಿ.ಆರ್. ಪಾಟೀಲರೆದುರು ಸೋಲು ಕಂಡರು. ಭಾರತೀಯ ಜನ ಸಂಘದಿಂದ ಕಣಕ್ಕಿಳಿದಿದ್ದ ಎಸ್.ಎಸ್. ಇನಾಂದಾರ 1,859 ಮತ ಗಳಿಸಿದ್ದರು.
- 1968- ಶಾಸಕರಾಗಿ ಆಯ್ಕೆಯಾಗಿದ್ದ ಬಿ.ಆರ್. ಪಾಟೀಲರು ನಿಧನರಾದ ಹಿನ್ನೆಲೆ, 1968ರಲ್ಲಿ ಉಪಚುನಾವಣೆ ನಡೆಯಿತು. ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎನ್. ದೇಸಾಯಿ 20,759 ಮತ ಗಳಿಸಿ ಆಯ್ಕೆಯಾದರು. ಪಿ.ಸಿ. ಶೆಟ್ಟರ್ 13,762 ಮತ ಗಳಿಸಿದ್ದರು. ಎಸ್‍ಎನ್‍ಪಿ ಅಭ್ಯರ್ಥಿ ಅಕ್ಕಿವಳ್ಳಿ ಮೊಹಮ್ಮದ್ ಇಸ್ಮಾಯಿಲ್ 4,328, ಪಕ್ಷೇತರ ಅಭ್ಯರ್ಥಿ ಅಬ್ದುಲ್ ರಸೀದ ಸದರ 1,006 ಮತ ಗಳಿಸಿದ್ದರು.
- 1972- ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪಿ.ಸಿ. ಶೆಟ್ಟರ್ 31,348 ಮತ ಗಳಿಸಿ ಆಯ್ಕೆಯಾದರು. ಎನ್‍ಸಿಒ ಅಭ್ಯರ್ಥಿ ಎಂ.ಎಸ್. ಶಂಕ್ರಿಕೊಪ್ಪ 15,002 ಮತ ಗಳಿಸಿದರು. ಪಕ್ಷೇತರ ಅಭ್ಯರ್ಥಿ ಬಿ.ವೈ. ಬಂಕಾಪುರ 806, ಭಾರತೀಯ ಜನ ಸಂಘದಿಂದ ಸ್ಪರ್ಧಿಸಿದ್ದ ಬಿ.ಡಿ. ಒಡೆಯರ 632 ಮತ ಪಡೆದಿದ್ದರು.
- 1978- ಕಾಂಗೈನಿಂದ ಪ್ರಥಮ ಬಾರಿಗೆ ಸ್ಪರ್ಧೆಗಿಳಿದ ಮನೋಹರ ತಹಸೀಲ್ದಾರ್ 35,228 ಮತಗಳಿಸಿ ಆಯ್ಕೆಯಾದರು. ಜೆಎನ್‍ಪಿ ಅಭ್ಯರ್ಥಿ ಎಂ.ಎಂ. ಮಾಳಗಿ 9,866, ಕಾಂಗ್ರೆಸ್ ಅಭ್ಯರ್ಥಿ ಎಸ್.ಬಿ. ಪಾಟೀಲ 8,609, ಪಕ್ಷೇತರ ಅಭ್ಯರ್ಥಿಗಳಾದ ಬಿ.ಎನ್. ಬಾಳೂರ 866, ವಿ.ಎಸ್. ಪಾಟೀಲ 772 ಮತ ಗಳಿಸಿದ್ದರು.
- 1983- ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಿ.ಎಂ. ಉದಾಸಿ 35,617 ಮತ ಗಳಿಸಿ ಪ್ರಥಮ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು. ಕಾಂಗ್ರೆಸ್ ಅಭ್ಯರ್ಥಿ ಮನೋಹರ ತಹಸೀಲ್ದಾರ್ 25,565 ಮತ ಪಡೆದು ಸೋತರು. ಜೆಎನ್‍ಪಿ ಅಭ್ಯರ್ಥಿ ಆರ್.ಆರ್. ಪಾಟೀಲ 1,568, ಪಕ್ಷೇತರ ಅಭ್ಯರ್ಥಿ ಎಚ್.ಡಿ. ತಿಮ್ಮೇನಹಳ್ಳಿ 224 ಮತ ಗಳಿಸಿದ್ದರು.
- 1985- ಜನತಾಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದ ಸಿ.ಎಂ. ಉದಾಸಿ ಅವರು 39,264 ಮತಗಳಿಸಿ ಆಯ್ಕೆಯಾದರು. ಕಾಂಗ್ರೆಸ್‍ನ ಮನೋಹರ ತಹಶೀಲ್ದಾರ್ 36,205 ಮತಗಳಿಸಿ ಎರಡನೇಯ ಬಾರಿಗೆ ಉದಾಸಿ ವಿರುದ್ಧ ಸೋಲು ಕಂಡರು. ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಜಿ.ಆರ್. ಅಂಗಡಿ 531, ಡಾ. ವೈ.ಎಂ. ಬಾರ್ಕಿ 450, ಆರ್.ಎಚ್. ಕುಲಕರ್ಣಿ 134, ವಿ.ಎಸ್. ಶಂಕ್ರಿಕೊಪ್ಪ 59 ಮತ ಗಳಿಸಿದ್ದರು.
- 1989- ಕಾಂಗ್ರೆಸ್ ಅಭ್ಯರ್ಥಿ ಮನೋಹರ ತಹಸೀಲ್ದಾರ್ 54,348 ಮತ ಗಳಿಸಿ ಆಯ್ಕೆಯಾದರು. ಜನತಾದಳದಿಂದ ಸ್ಪರ್ಧಿಸಿದ್ದ ಸಿ.ಎಂ. ಉದಾಸಿ 39,023 ಮತ ಪಡೆದು ಮನೋಹರ ತಹಶೀಲ್ದಾರ್ ವಿರುದ್ಧ ಪ್ರಥಮ ಬಾರಿಗೆ ಪರಾಭವಗೊಂಡರು. ಜೆಎನ್‍ಪಿ ಅಭ್ಯರ್ಥಿ ಎನ್.ಡಿ. ಪಾಟೀಲ 1,525 ಮತಗಳಿಸಿದರು.
- 1994- ಮತ್ತೆ ಜನತಾದಳದಿಂದ ಸ್ಪರ್ಧೆಗಿಳಿದ ಸಿ.ಎಂ. ಉದಾಸಿ 56,348 ಮತಗಳಿಸಿ ಮೂರನೇ ಬಾರಿಗೆ ಜಯಭೇರಿ ಬಾರಿಸಿದರು. ಕಾಂಗ್ರೆಸ್‍ನ ಮನೋಹರ ತಹಸೀಲ್ದಾರ್ 38,865 ಮತಗಳಿಸಿ ಸೋತರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಎಂ.ಕೆ. ಬಾಬಜಿ 3,391, ಕೆಸಿಪಿ ಅಭ್ಯರ್ಥಿ ಎಫ್.ಟಿ. ನಿಂಗೋಜಿ 2,980 ಮತಗಳಿಸಿದ್ದರು.
- 1999- ಮತ್ತೆ ಕಾಂಗ್ರೆಸ್ ಅಭ್ಯರ್ಥಿ ಮನೋಹರ ತಹಸೀಲ್ದಾರ್ 59,628 ಮತಗಳಿಸಿ ಆಯ್ಕೆಯಾದರು. ಜೆಡಿಯುನಿಂದ ಸ್ಪರ್ಧಿಸಿದ್ದ ಸಿ.ಎಂ. ಉದಾಸಿ 44,370 ಮತಗಳಿಸಿ ಎರಡನೇ ಬಾರಿಗೆ ಸೋಲು ಕಂಡರು. ಸಿಪಿಐ(ಎಂ) ಅಭ್ಯರ್ಥಿ ಫಕ್ಕಿರಪ್ಪ ಹೋತನಹಳ್ಳಿ 2,415, ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಬಣಕಾರ 627, ಪಕ್ಷೇತರ ಅಭ್ಯರ್ಥಿ ಶೈಲಜಾ ಸವದತ್ತಿ 544 ಮತ ಗಳಿಸಿದ್ದರು.
- 2004- ಕಳೆದ ಬಾರಿ ಜೆಡಿಯುನಿಂದ ಸ್ಪರ್ಧಿಸಿದ್ದ ಸಿ.ಎಂ. ಉದಾಸಿ ಈ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 61,167 ಮತಗಳಿಸಿ ಆಯ್ಕೆಯಾದರು. ಕಾಂಗ್ರೆಸ್ ಅಭ್ಯರ್ಥಿ ಮನೋಹರ ತಹಸೀಲ್ದಾರ್ 43,080, ಪಕ್ಷೇತರ ಅಭ್ಯರ್ಥಿ ಜಿ.ಎಸ್. ಗಂಟೇರ 7,942, ಜೆಡಿಎಸ್ ಅಭ್ಯರ್ಥಿ ಎನ್.ಬಿ. ಪೂಜಾರ 4,238, ಬಿಎಸ್‍ಪಿ ಅಭ್ಯರ್ಥಿ ಎಂ.ಜಿ. ಇಸ್ಮಾಯಿಲ್ ಮೇರವಾಡೆ 1,595 ಮತ ಗಳಿಸಿದ್ದರು.
- 2008- ಬಿಜೆಪಿಯಿಂದ ಸಿ.ಎಂ. ಉದಾಸಿ ಸತತ ಎರಡನೇ ಬಾರಿಗೆ ಸ್ಪರ್ಧಿಸಿ 60,025 ಮತಗಳಿಸಿ ಆಯ್ಕೆಯಾದರು. ಕಾಂಗ್ರೆಸ್ ಅಭ್ಯರ್ಥಿ ಮನೋಹರ ತಹಸೀಲ್ದಾರ್ 54,103, ಜೆಡಿಎಸ್ ಅಭ್ಯರ್ಥಿ ಎ.ಎಂ. ಪಠಾಣ 3,253, ಎಸ್‍ಪಿ ಅಭ್ಯರ್ಥಿ ಜಿ.ಎಸ್. ಗಂಟೇರ 2,924, ಪಕ್ಷೇತರ ಅಭ್ಯರ್ಥಿ ಪುಂಡಲೀಕ ಭದ್ರಾವತಿ 1,240, ಬಿಎಸ್‍ಪಿ ಅಭ್ಯರ್ಥಿ ಪ್ರದೀಪನವರ ನಾಗೇಶಪ್ಪ ಶಿವರುದ್ರಪ್ಪ 831, ಅಖಿಲ ಭಾರತ ಹಿಂದೂ ಮಹಾಸಭಾದ ಅಭ್ಯರ್ಥಿ ಶ್ರೀನಿವಾಸ ಡಿ.ಎಸ್ 546, ಜೆಡಿಯು ಅಭ್ಯರ್ಥಿ ಚಾಮರಾಜ 320 ಮತಗಳಿಸಿ ಸೋಲುಕಂಡರು.
- 2013- ಕಾಂಗ್ರೆಸ್‍ನ ಮನೋಹರ ತಹಸೀಲ್ದಾರ್ 66324 ಮತಗಳನ್ನು ಪಡೆಯುವ ಮೂಲಕ ವಿಜಯ ಸಾಧಿಸಿದರು. ಕೆಜೆಪಿಯಿಂದ ಸ್ಪರ್ಧಿಸಿದ್ದ ಸಿ.ಎಂ. ಉದಾಸಿ 60638 ಮತಗಳನ್ನು ಪಡೆಯುವ ಮೂಲಕ ಸೋಲುಂಡರು.
- 2018- ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿ.ಎಂ.ಉದಾಸಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆಗೆ ಸೋಲುಣಿಸಿದರು. 5 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಪ್ರಥಮ ಸ್ಪರ್ಧೆಯಲ್ಲಿಯೇ ಶ್ರೀನಿವಾಸ ಮಾನೆ ಸೋಲುಕಂಡರು.
ಪುನರ್ ಆಯ್ಕೆಯಾದವರು:
1983, 1985, 1994, 2004, 2008, 2018ರಲ್ಲಿ ಸಿ.ಎಂ. ಉದಾಸಿ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದಾರೆ. ಇವರಲ್ಲದೇ ಕಾಂಗ್ರೆಸ್‍ನ ಮನೋಹರ ತಹಸೀಲ್ದಾರ್ 1978, 1989, 1999, 2013ರಲ್ಲಿ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಪಕ್ಷೇತರ ಅಭ್ಯರ್ಥಿ ಬಿ.ಆರ್. ಪಾಟೀಲರು 1957, 1967ರಲ್ಲಿ ಎರಡು ಬಾರಿ, ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ದೇಸಾಯಿ 1962, 1968ರಲ್ಲಿ ಎರಡು ಬಾರಿ ಆಯ್ಕೆಯಾಗಿದ್ದಾರೆ.