ಹಾವೇರಿ:ಬಿ ಸಿ ಪಾಟೀಲ್ ಪುತ್ರಿ ಸೃಷ್ಠಿ ಪಾಟೀಲ್ ಅವರು ಹಿರೇಕೆರೂರು ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಹಿರೇಕೆರೂರು ಉಪಸಮರ.. ಪಕ್ಷೇತರ ಅಭ್ಯರ್ಥಿಯಾಗಿ ಬಿ ಸಿ ಪಾಟೀಲ್ ಪುತ್ರಿ ನಾಮಪತ್ರ ಸಲ್ಲಿಕೆ! ಈ ವೇಳೆ ಮಾತನಾಡಿದ ಅವರು,ತಮ್ಮ ತಂದೆ ನಾಮಪತ್ರದಲ್ಲಿ ಏನಾದರೂ ತೊಂದರೆಯಾದರೆ ಎನ್ನುವ ದೂರದೃಷ್ಠಿಯಿಂದ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಒಂದು ವೇಳೆ ನಮ್ಮ ತಂದೆ ಬಿ ಸಿ ಪಾಟೀಲ್ ನಾಮಪತ್ರ ಅಸಿಂಧುವಾದರೆ ನಾನು ಸ್ಪರ್ಧಿಸುತ್ತೇನೆ. ನಮ್ಮ ತಂದೆ ನಾಮಪತ್ರ ಕ್ರಮಬದ್ಧವಾಗಿದ್ದರೆ ನನ್ನ ನಾಮಪತ್ರ ವಾಪಸ್ ಪಡೆಯುವುದಾಗಿ ತಿಳಿಸಿದರು.
ಕಾಂಗ್ರೆಸ್ನವರಿಗೆ ಟೀಕೆ ಮಾಡುವುದನ್ನು ಬಿಟ್ಟರೇ ಬೇರೆ ಕೆಲಸವಿಲ್ಲ :
ಹಾವೇರಿ ಜಿಲ್ಲೆ ಹಿರೇಕೆರೂರು ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಬಿ ಸಿ ಪಾಟೀಲ್ ನಾಮಪತ್ರ ಸಲ್ಲಿಸಿದ್ದಾರೆ. ಬಳಿಕ ಮಾತನನಾಡಿದ ಅವರು, ಕಾಂಗ್ರೆಸ್ವರಿಗೆ ಟೀಕೆ ಮಾಡುವುದನ್ನು ಬಿಟ್ಟರೇ ಬೇರೆ ಕೆಲಸವಿಲ್ಲ. ರಾಜ್ಯದಲ್ಲಿ ಹೆಚ್ಡಿಕೆ ಸರ್ಕಾರ ಕೇವಲ ನಾಲ್ಕೈದು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿತ್ತು. ನಾನು ಶಾಸಕನಾಗಿದ್ದರೂ ಸಹ ಹಿರೇಕೆರೂರು ಅಭಿವೃದ್ಧಿ ಮಾಡಲು ಆಗಲಿಲ್ಲ. ಇದರಿಂದ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದೇನೆ. ಪ್ರತಿಬಾರಿ ಪಕ್ಷ ಬದಲಾವಣೆ ಮಾಡಿದಾಗ ಜನ ನನ್ನ ಗೆಲ್ಲಿಸಿದ್ದಾರೆ. ನನ್ನ ನಿರ್ಧಾರಕ್ಕೆ ಜನ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದು, ಈ ಬಾರಿ ಸಹ ಜಯ ನನ್ನದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನ್ನ ಸಿದ್ದಾಂತಗಳಿಗೆ ಒಪ್ಪಿ ಜೆಡಿಎಸ್ ಪಕ್ಷ ಟಿಕೆಟ್ ನೀಡಿದೆ :
ನನ್ನ ಸಿದ್ದಾಂತಗಳಿಗೆ ಒಪ್ಪಿ ಜೆಡಿಎಸ್ ಪಕ್ಷವೇ ನನಗೆ ಟಿಕೆಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ನಿಂದ ನಾನು ಸ್ಪರ್ಧಿಸುತ್ತಿದ್ದೇನೆ ಎಂದು ರಟ್ಟಿಹಳ್ಳಿ ಕಬ್ಬಿಣ ಕಂಥಿಮಠ ಸ್ವಾಮೀಜಿ ತಿಳಿಸಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರಲ್ಲಿ ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು, ನಾನು ಯಾವುದೇ ಒತ್ತಡ ಆಮೀಷಗಳಿಗೆ ಒಳಗಾಗಿಲ್ಲ. ರಾಜಕೀಯ ಪಕ್ಷಗಳ ಕೆಲ ಮುಖಂಡರು ಸೋಲಿನ ಭಯದಿಂದ ನನ್ನ ಜೊತೆ ಸಂಧಾನಕ್ಕೆ ಬಂದಿರಬಹುದು. ಆದರೆ, ಆ ರೀತಿಯ ಸಂಧಾನಕ್ಕೆ ನಾನು ಒಪ್ಪುವವನಲ್ಲ. ಧಾರ್ಮಿಕ ಕ್ಷೇತ್ರದಲ್ಲಿ ರಾಜಕೀಯವು ಸಹ ಸಮಾಜ ಸೇವೆ ಸಲ್ಲಿಸಲು ಒಂದು ಕ್ಷೇತ್ರ. ಹೀಗಾಗಿ ತಾವು ರಾಜಕೀಯಕ್ಕೆ ಬಂದಿದ್ದು,ಇದರಲ್ಲಿ ಆಶ್ಚರ್ಯಪಡುವಂತದೇನಿಲ್ಲ. ಮಠ ಪೀಠಾಧಿಪತಿಯಾಗಿದ್ದು, ಈ ಸೇವೆ ಸಲ್ಲಿಸುವ ಅರ್ಹತೆ ನನಗಿದೆ. ನಾನು ಸ್ಪರ್ಧಿಸಿದ ಮೇಲೆ ಮಠದ ಉತ್ತರಾಧಿಕಾರಿ ಪ್ರಶ್ನೆ ಇಲ್ಲಿ ಬರುವುದಿಲ್ಲ. ಎರಡು ಕ್ಷೇತ್ರಗಳಲ್ಲಿ ಇರುತ್ತೇನೆ. ಎಲ್ಲ ರಾಜಕಾರಣಿಗಳು ತಮಗೆ ಭಕ್ತರೆ, ಚುನಾವಣೆಯಲ್ಲಿ ಮಾತ್ರ ನಾವು ಎದುರಾಳಿಗಳು. ಕೆಲ ರಾಜಕೀಯ ಪಕ್ಷಗಳು ನಾನು ಚುನಾವಣೆಗೆ ಸ್ಪರ್ಧಿಸುವ ಇಂಗಿತವನ್ನ ಮೊದಲೇ ಹೇಳಿದ್ದರೆ,ಟಿಕೆಟ್ ನೀಡುತ್ತಿದ್ದzವು ಎಂದು ತಿಳಿಸಿವೆ. ಆದರೆ, ನನ್ನ ನಿರ್ಧಾರ ಭಕ್ತರ ಮೇಲೆ ಅವಲಂಬಿತರಾಗಿದ್ದರಿಂದ ಭಕ್ತರ ಒತ್ತಡದ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು.
ಹಿರೇಕೆರೂರು ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ ಹೆಚ್ ಬನ್ನಿಕೋಡ್ ನಾಮಪತ್ರ:
ಹಾವೇರಿ ಜಿಲ್ಲೆ ಹಿರೇಕೆರೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ ಹೆಚ್ ಬನ್ನಿಕೋಡ್ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಿದ ನಂತರ ಬನ್ನಿಕೋಡ್ ತೆರೆದ ವಾಹನದಲ್ಲಿ ಬೃಹತ್ ಮೆರವಣಿಗೆ ನಡೆಸಿದರು. ನಗರದ ಶಂಕರ್ ವೃತ್ತದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯುದ್ದಕ್ಕೂ ಕಾಂಗ್ರೆಸ್ ಧ್ವಜ ಹಿಡಿದ ಕಾರ್ಯಕರ್ತರು ಸಿದ್ದರಾಮಯ್ಯ ಪರ ಹಾಗೂ ಬನ್ನಿಕೋಡ್ ಪರ ಜಯಘೋಷ ಹಾಕಿದರು. ಬಿ ಹೆಚ್ ಬನ್ನಿಕೋಡ್ ಮೆರವಣಿಗೆಯಲ್ಲಿ ಕಾಂಗ್ರೆಸ್ ಮುಖಂಡರಾದ ಹೆಚ್ ಕೆ ಪಾಟೀಲ್, ರಮೇಶಕುಮಾರ್ ಸೇರಿದಂತೆ ವಿವಿಧ ಮುಖಂಡರು ಪಾಲ್ಗೊಂಡಿದ್ದರು.